ಹೈದರಾಬಾದ್: ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ಅಸಾನಿ ಚಂಡಮಾರುತ ಬಡಿದಪ್ಪಳಿಸಿದ್ದು, ಇದೇ ವೇಳೆ ಚಿನ್ನದ ಬಣ್ಣ ಲೇಪಿತ ನಿಗೂಢ ರಥವೊಂದು ತೇಲಿ ಬಂದು ದಡ ಸೇರಿದ ಘಟನೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಸಮುದ್ರದ ಬಂದರು ಪ್ರದೇಶದ ಸಮೀಪ ನಡೆದಿದೆ.
ಸಮುದ್ರದ ಅಬ್ಬರದ ಅಲೆಯ ನಡುವೆ ತೇಲಿ ಬರುತ್ತಿದ್ದ ಚಿನ್ನದ ಬಣ್ಣದ ರಥವನ್ನು ಸ್ಥಳೀಯರು ಎಳೆದು ದಡಕ್ಕೆ ಸೇರಿಸಿರುವ ಪ್ರಯತ್ನ ಮಾಡಲಾಗಿದ್ದು ಈ ರಥ ಬೇರೆ ದೇಶದಿಂದ ತೇಲಿ ಬಂದಿರಬಹುದು ಎಂದು ಶಂಕಿಸಲಾಗಿದೆ.
ಈ ದೃಶ್ಯದ ವೀಡಿಯೋ ವೈರಲ್ ಆಗಿದ್ದು ಘಟನೆ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಶ್ರೀಕಾಕುಳಂನ ಸಬ್ ಇನ್ಸ್‌ಪೆಕ್ಟರ್ ನೌಪಾದ ತಿಳಿಸಿದ್ದಾರೆ.
ಚಿನ್ನದ ಬಣ್ಣದ ರಥ ತೇಲಿ ಬಂದಿರುವ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮದ ಜನರು ಸುನ್ನಪಲ್ಲಿ ಬಂದರು ಪ್ರದೇಶದತ್ತ ಜನರು ದೌಡಾಯಿಸಿದ್ದಾರೆ. ಗಂಟೆಗೆ 105 ಕಿಲೋ ಮೀಟರ್ ವೇಗದ ಗಾಳಿಯೊಂದಿಗೆ ಪೂರ್ವ ಕರಾವಳಿ ತಲುಪಲಿರುವ ಅಸಾನಿ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.
ನಿನ್ನೆ ರಾತ್ರಿ ವೇಳೆಗೆ ಅಸಾನಿ ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದರೂ ಕೂಡಾ ಪಶ್ಚಿಮಬಂಗಾಳ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಹಾಗೂ ಕೇರಳದ ಕರಾವಳಿ ಭಾಗದಲ್ಲಿ ಭಾರೀ ಗಾಳಿ, ಮಳೆಯಾಗಿದೆ.