ಕಾರ್ಕಳ: ನಕ್ಸಲ್ ಚಟುವಟಿಕೆಗೆ ಕುರಿತ ವಿಚಾರಣೆಗಾಗಿ ಉಡುಪಿಗೆ ಕರೆತಂದಿದ್ದ ನಕ್ಸಲ್ ಮುಖಂಡ ಬಿ.ಜಿ. ಕೃಷ್ಣಮೂರ್ತಿ ಮತ್ತು ನಕ್ಸಲ್ ಸದಸ್ಯೆ ಸಾವಿತ್ರಿ ಅವರ ವಿಚಾರಣೆ ಪೂರ್ಣವಾದ ಹಿನ್ನೆಲೆಯಲ್ಲಿ ಪುನಃ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇವರನ್ನು ಕಾರ್ಕಳ, ಹೆಬ್ರಿ, ಅಜೆಕಾರು ಠಾಣೆಗಳ ವ್ಯಾಪ್ತಿ ಯಲ್ಲಿ ನಡೆದ ನಕ್ಸಲ್ ಚಟುವಟಿಕೆ ಪ್ರಕರಣಗಳಿಗೆ ಸಂಬಂಧಿಸಿ ಮೇ 3ರಂದು ಪೊಲೀಸರು
ನ್ಯಾಯಾಲಯದ ಮೂಲಕ ಬಾಡಿ ವಾರಂಟ್ ಪಡೆದು 12 ದಿನಗಳ ಅವಧಿಗೆ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಕಾರ್ಕಳ ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿರಿಸಿ ಸೀತಾನದಿ, ಮುಟ್ಲುಪ್ಪಾಡಿ, ಈದು,
ನೂರಾಳ್‌ಬೆಟ್ಟು ಮೊದಲಾದ ಸ್ಥಳಗಳಿಗೆ ಕರೆದೊಯ್ದು ಹತ್ಯೆ ಪ್ರಕರಣ, ಕರಪತ್ರ ಹಂಚಿಕೆ, ಚಳವಳಿ ಇನ್ನಿತರ ವಿಚಾರಗಳಿಗೆ ಸಂಬಂಧಿಸಿ ವಿಚಾರಣೆ, ಸ್ಥಳ ಮಹಜರು ನಡೆಸಿದ್ದರು. ವಿಚಾರಣೆ ಪ್ರಕ್ರಿಯೆ 8 ದಿನಗಳಲ್ಲಿ ಪೂರ್ಣಗೊಂಡಿದೆ.
ಎಲ್ಲ ಪ್ರಶ್ನೆಗಳಿಗೆ ಇಬ್ಬರೂ ಸಕಾರಾ ತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಬಿ.ಜಿ. ಕೃಷ್ಣಮೂರ್ತಿ ವಿರುದ್ಧ 53, ಸಾವಿತ್ರಿ ವಿರುದ್ಧ 22 ಪ್ರಕರಣಗಳಿವೆ. ಡಿವೈಎಸ್ಪಿ ವಿಜಯ ಪ್ರಸಾದ್, ವೃತ್ತ ನಿರೀಕ್ಷಕ ಸಂಪತ್ ಕುಮಾರ್,
ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ ಅವರನ್ನು ಒಳಗೊಂಡ ಪೊಲೀಸ್ ತಂಡ ನಕ್ಸಲರಿಬ್ಬರನ್ನು ಬಿಗು ಬಂದೋಬಸ್ತ್‌ನಲ್ಲಿ ಮತ್ತೆ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಕರೆದೊಯ್ದು ಒಪ್ಪಿಸಿತು.