Saturday, April 1, 2023

ಉಡುಪಿ: ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ 24 ಆರೋಪಿಗಳ ಬಂಧನ

ಉಡುಪಿ: ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ 24 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಹೆಬ್ರಿ ಠಾಣೆ ವ್ಯಾಪ್ತಿಯ ಪ್ರಕಾಶ್‌ ಯಾನೆ ಫಕೀರಪ್ಪ, ಕಾಪು ಠಾಣೆ ವ್ಯಾಪ್ತಿಯ ಒಲಿವರ್‌ ಗ್ಲಾಡನ್‌ ವಿಲ್ಸನ್‌, ಬ್ರಹ್ಮಾವರ ಠಾಣೆ ವ್ಯಾಪ್ತಿಯ ರಾಜೀವ ಶೆಟ್ಟಿ, ಶಿರ್ವಾ ಠಾಣೆ ವ್ಯಾಪ್ತಿಯ ಗುರುಪ್ರಸಾದ್, ಉಮರ್‌, ಸುದರ್ಶನ್‌,

ಮಣಿಪಾಲ ಠಾಣೆ ವ್ಯಾಪ್ತಿಯ ಜೀತೇಂದ್ರ ಶಾರ್ಕಿ, ಬೈಂದೂರು ಠಾಣೆ ವ್ಯಾಪ್ತಿಯ ಬಾಬು, ಕೃಷ್ಣನ್‌ ಕುಟ್ಟಿ, ಸಹದೇವಾ, ಸುನಿಲ್‌ ಕುಮಾರ್‌, ಮತ್ತು ಕುಂದಾಪುರ ಠಾಣೆ ವ್ಯಾಪ್ತಿಯ ಶೇಷಮನಿ ನಾಮದೇವ್ ಬಂಧತರಲ್ಲಿ ಪ್ರಮುಖರು.

ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ಆ ತಂಡಗಳು ಕಳೆದ 15 ದಿನಗಳಿಂದ ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿ ಸಂಚರಿಸಿ ಇವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆ ಪೈಕಿ ಭಾರತ – ನೇಪಾಳ ಗಡಿ ಪ್ರದೇಶದಲ್ಲಿ ಒಬ್ಬರು, ಮಧ್ಯಪ್ರದೇಶದಲ್ಲಿ ಒಬ್ಬರು, ಕೇರಳದಲ್ಲಿ ಮೂವರು, ಹೊರಜಿಲ್ಲೆಗಳಲ್ಲಿ ನಾಲ್ವರನ್ನು ಹಾಗೂ ಉಳಿದವರನ್ನು ಉಡುಪಿ ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿದೆ.

ಬಂಧಿತರಲ್ಲಿ 12 ವರ್ಷಗಳಿಂದ ತಲೆಮರೆಸಿಕೊಂಡ ಇಬ್ಬರು, 10 ವರ್ಷಗಳಿಂದ ತಲೆಮರೆಸಿಕೊಂಡ ಇಬ್ಬರು, 7 ವರ್ಷಗಳಿಂದ ತಲೆಮರೆಸಿಕೊಂಡ ಇಬ್ಬರು, 6 ವರ್ಷಗಳಿಂದ ತಲೆಮರೆಸಿಕೊಂಡ ಒಬ್ಬರು,

5 ವರ್ಷಗಳಿಂದ ತಲೆಮರೆಸಿಕೊಂಡ ಇಬ್ಬರು, 4 ವರ್ಷಗಳಿಂದ ತಲೆಮರೆಸಿಕೊಂಡ ಇಬ್ಬರು, 3 ವರ್ಷಗಳಿಂದ ತಲೆಮರೆಸಿಕೊಂಡ ಒಬ್ಬರು, 2 ವರ್ಷಗಳಿಂದ ತಲೆಮರೆಸಿಕೊಂಡ ನಾಲ್ವರು, ಹಾಗೂ 8 ಮಂದಿ ಒಂದು ವರ್ಷದಿಂದ ತಲೆಮರೆಸಿಕೊಂಡವರಾಗಿರುತ್ತಾರೆ.
ತಲೆಮರೆಸಿಕೊಂಡವರ ಪೈಕಿ ದರೋಡೆ, ಸರಕಾರಿ ನೌಕರರ ಮೇಲೆ ಹಲ್ಲೆ, ಕಳವು, ಅಪಹರಣ, ಅತ್ಯಾಚಾರ, ಮಾರಣಾಂತಿಕ ರಸ್ತೆ ಅಪಘಾತ ಹಾಗೂ ಚೆಕ್‌ ಅಮಾನ್ಯ ಪ್ರಕರಣಗಳಲ್ಲಿ ಒಳಗೊಂಡ ಆರೋಪಿಗಳಾಗಿದ್ದಾರೆ.

ಕೊಲ್ಲೂರು ಠಾಣೆಯಲ್ಲಿ ವರದಿಯಾದ ಪ್ರಕರಣವೊಂದರಲ್ಲಿ ಭಾಗಿಯಾಗಿ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ನಿಶಿ ಎಂಬಾಕೆಯನ್ನು ಕೇರಳ ರಾಜ್ಯದ ತಳಿಪರಂಬ ಎಂಬಲ್ಲಿ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics