ಬೈಂದೂರು: ಮಗುವೊಂದು ಹೊಳೆಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ.
ಕರ್ಕಿಕಳಿಯ ವಿಶ್ವನಾಥ ಖಾರ್ವಿ ಎಂಬವರ ಪುತ್ರ ಸರ್ವದ (2) ಮೃತ ಮಗು. ತಾಯಿ ಮಗುವನ್ನು ಮನೆಯ ಕೋಣೆಯಲ್ಲಿ ಮಲಗಿಸಿ ಉಪ್ಪುಂದ ಪೇಟೆಗೆ ಹೋಗಿದ್ದಾರೆ. ನಿದ್ದೆಯಿಂದ ಎದ್ದಾಗ ಮನೆಯಲ್ಲಿ ಯಾರೂ ಕಾಣದಿದ್ದುದರಿಂದ ಮಗು ಎದ್ದು ಮನೆಯಿಂದ ಹೊರಗೆ ಬಂದಿತ್ತೆನ್ನಲಾಗಿದೆ.
ನಂತರ ಮಗು ಮನೆಯ ಸಮೀಪ ಹರಿಯುವ ಎಡಮಾವಿನ ಹೊಳೆಯ ದಡದಲ್ಲಿ ನಡೆದುಕೊಂಡು ಹೋಗುವಾಗ ಆಯತಪ್ಪಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಮೃತದೇಹವು ಹೊಳೆಯಲ್ಲಿ ತೇಲಿಕೊಂಡು ಹೋಗಿದ್ದು, ಎಡಮಾವಿನ ಹೊಳೆಯು ಸಮುದ್ರವನ್ನು ಸೇರುವ ಉಪ್ಪುಂದ-ಕರ್ಕಿಕಳಿ ಬ್ರೇಕ್ ವಾಟರ್ ಸಮೀಪ ಪತ್ತೆಯಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ