ಡೆಹ್ರಾಡೂನ್: ಗಂಡನ ಮನೆಯವರು ಕಳುಹಿಸಿದ ಲೆಹೆಂಗಾ ಇಷ್ಟವಾಗದಿದ್ದಕ್ಕೆ ವಧುವೊಬ್ಬಳು ಮದುವೆಯನ್ನೇ ರದ್ದು ಮಾಡಿರುವ ವಿಚಿತ್ರ ಘಟನೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದಿದೆ.
ಹಲ್ದ್ವಾನಿ ಮೂಲದ ವಧು ಮತ್ತು ಆಲ್ಮೋರಾ ಮೂಲದ ವರನಿಗೂ ಕಳೆದ ಜೂನ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆದಿತ್ತು. ಇಬ್ಬರ ಮದುವೆ ನ.5ಕ್ಕೆ ನಡೆಯಬೇಕಿತ್ತು.
ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ವರನ ಕುಟುಂಬಕ್ಕೆ ಇದೀಗ ವಧುವಿನ ಕುಟುಂಬದವರು ಬಿಗ್ ಶಾಕ್ ನೀಡಿದ್ದಾರೆ. ಲೆಹೆಂಗಾ ಸರಿಯಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಮದುವೆ ರದ್ದು ಮಾಡಿಕೊಂಡಿದ್ದಾರೆ.
ಸಂಬಂಧಿಕರು ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿ, ವಿಫಲವಾದ ಬಳಿಕ ಎರಡು ಮನೆಯವರು ಕೊಟ್ವಾಲಿ ಪೊಲೀಸ್ ಠಾಣೆಗೆ ಆಗಮಿಸಿದ್ದರು.
ಬಳಿಕ ಠಾಣೆಯಲ್ಲಿ ಎರಡು ಕುಟುಂಬದವರಿಗೆ ಬುದ್ಧಿ ಮಾತಿನ ಜತೆಗೆ ಎಚ್ಚರಿಕೆ ನೀಡಿದ ಬಳಿಕ ಕೊನೆಗೂ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದರು.
ಸಂಪ್ರದಾಯದಂತೆ ಇತ್ತೀಚೆಗೆ ವರನ ತಂದೆ ವಧುವಿಗೆ 10 ಸಾವಿರ ರೂ. ಮೌಲ್ಯದ ಲೆಹೆಂಗಾವನ್ನು ಕಳುಹಿಸಿಕೊಟ್ಟಿದ್ದರು.
ಆದರೆ, ಲೆಹೆಂಗಾ ಇಷ್ಟವಾಗಲಿಲ್ಲ ಎಂಬ ವಿಚಾರಕ್ಕೆ ಎರಡು ಕುಟುಂಬಗಳು ನಡುವೆ ಮನಸ್ತಾಪ ಮತ್ತು ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿದೆ. ಕೊನೆಗೆ ವಧು ಮದುವೆಯನ್ನೇ ರದ್ದು ಮಾಡಿಕೊಂಡಿದ್ದಾಳೆ.