ಬೆಳ್ತಂಗಡಿ: ಯುವಕನೊಬ್ಬತನ್ನ ವಿನೂತನ ಶೈಲಿಯ ಜೀನ್ಸ್ ಪ್ಯಾಂಟ್ ಧರಿಸಿ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಬಂದಾಗ ಮೂವರು ಸೇರಿ ಆತನನ್ನು ತಡೆದು ಎರಡು ಕೈಗಳನ್ನು ಲಾಕ್ ಮಾಡಿ ಪ್ಯಾಂಟ್ ಗೆ ಗೋಣಿಚೀಲದ ಸೂಜಿಯಿಂದ ಹೊಲಿದು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರಿಂದ ನೋಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನ.22ರ ಶುಕ್ರವಾರ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್(21) ಆತ್ಮಹತ್ಯೆಗೆ ಯತ್ನಿಸಿದ ಯುವಕ.
ಈತನ ವಿಡಿಯೋ ವೈರಲ್ ಆಗುತ್ತಲೇ, ತನ್ನ ಸ್ನೇಹಿತರು ಯುವಕನಿಗೆ ವಿಡಿಯೋ ಕಳುಹಿಸಿದ್ದಾರೆ. ಇದರಿಂದ ಮನನೊಂದ ಸಂಜೆ ವೇಳೆಗೆ ಆತ್ಮಹತ್ಯೆಗೆ ಯತ್ನಿಸಿ ಜೀವಣ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ ಎಂದು ತಿಳಿದು ಬಂದಿದೆ.
ನವೀನ ಮಾದರಿಯ ಜೀನ್ಸ್ ಪ್ಯಾಂಟ್ ಹರಿದ ರೀತಿಯಲ್ಲಿತ್ತು. ಅದನ್ನು ಧರಿಸಿ ನ.21 ರಂದು ಮಧ್ಯಾಹ್ನ ಬೆಳ್ತಂಗಡಿ ನಗರದಲ್ಲಿರುವ ಸಂತೆಕಟ್ಟೆ ಮಾರುಕಟ್ಟೆಗೆ ಬಂದಿದ್ದ. ಮಾರುಕಟ್ಟೆಯಲ್ಲಿದ್ದ ಪಡ್ಡೆ ಹುಡುಗರ ತಂಡವೊಂದು ಆತನನ್ನು ಸಾರ್ವಜನಿಕವಾಗಿ ಎರಡು ಕೈಗಳನ್ನು ಹಿಂದಕ್ಕೆ ಹಿಡಿದು ಬಲವಂತದಿಂದ ಹಿಡಿದಿಟ್ಟು ಆತನ ಪ್ಯಾಂಟನ್ನು ಗೋಣಿ ಹೊಲಿಯುವ ಸೂಜಿಯಿಂದ ಹೊಲಿದು ಜತೆಗೆ ಮೊಬೈಲ್‌ನಲ್ಲಿ ವೀಡಿಯೊ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಹರಿಯಬಿಟ್ಟಿದ್ದರು.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬಿರ್, ಅನೀಶ್ ಪಣಕಜೆ, ಲಾಯಿಲ ಗ್ರಾಮದ ಆದರ್ಶ ನಗರದ ನಿವಾಸಿ ಸಲೀಂ ಎಂಬವರು ಸೇರಿ ಈ ದುಷ್ಕ್ರತ್ಯ ನಡೆಸಿದ್ದಾರೆ ಎನ್ನಲಾಗಿದೆ.
ವಿಡಿಯೋ ಮಾಡಿ ಟ್ರೋಲ್ ಮಾಡಿದರಿಂದ ಮಾನಸಿಕವಾಗಿ ನೊಂದ ಶಾಹಿಲ್ ನ.21 ರಂದು ಸಂಜೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದು, ತಕ್ಷಣ ಮನೆಯವರು ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟಣೆ ಬಗ್ಗೆ ಸಾರ್ವಜನಿಕರು ಈ ಮೂವರನ್ನು ಪುಂಡರ ವಿರುದ್ಧ ಕಠಿನ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.