Connect with us

DAKSHINA KANNADA

ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ಸಿಗೆ ಮರ್ಮಾಘಾತ;ಇಬ್ಬರು ನಾಯಕರ ಅಕಾಲಿಕ ಸಾವು..!

Published

on

ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ಸಿಗೆ ಮರ್ಮಾಘಾತ;ಇಬ್ಬರು ನಾಯಕರ ಅಕಾಲಿಕ ಸಾವು..!

ಬಂಟ್ವಾಳ: ದ.ಕ. ಜಿ.ಪಂ. ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಂದಾಳು ಬಿ.ಸದಾನಂದ ಪೂಂಜ(80) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದ್ದಾರೆ. ಸಜೀಪಮೂಡ ಗ್ರಾಮದ ಅಭಿವೃದ್ಧಿಯ ರೂವಾರಿಗಳಾಗಿ ಗುರುತಿಸಿಕೊಂಡಿದ್ದ ಅವರು, ಸಜೀಪ ಮಾಗಣೆಯ ಆಡಳಿತದಾರರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದು, ದ.ಕ. ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಸುಭಾಷ್‌ನಗರ ಶಾರದೋತ್ಸವ ಸಮಿತಿ, ಸುಭಾಷ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ, ಸಜೀಪಮೂಡದಲ್ಲಿ ಸರಕಾರಿ ಪ.ಪೂ.ಕಾಲೇಜು ಸ್ಥಾಪನೆಗೆ ಪ್ರಮುಖ ಕಾರಣರಾಗಿದ್ದರು.

ತಾಲೂಕು ಬೋರ್ಡ್ ಉಪಾಧ್ಯಕ್ಷರಾಗಿ, ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಸದಸ್ಯರಾಗಿ, ಮಂಡಲ ಹಾಗೂ ಗ್ರಾ.ಪಂ. ಅಧ್ಯಕ್ಷರಾಗಿ, ಈಶ್ವರಮಂಗಲ ದೇವಸ್ಥಾನದ ಅಭಿವೃದ್ಧಿಯ ರೂವಾರಿಗಳಾಗಿ ಹೀಗೆ ಹತ್ತು ಹಲವು ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಶನಿವಾರ ಸಂಜೆ (ಮಾ.13) ಸಜೀಪಮೂಡ ಸುಭಾಷ್‌ನಗರದಲ್ಲಿರುವ ಅವರ ಮನೆ ಶಾಂತಿ ನಿಕೇತನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರ ದೇವಿಪ್ರಸಾದ್ ಪೂಂಜ ತಿಳಿಸಿದ್ದಾರೆ.

************************************************************************ಮಂಗಳೂರಿನ ಪರಿಚಿತ ಪರಿಸರ ಕಾರ್ಯಕರ್ತ, ಮಲೇರಿಯಾ ಮುಕ್ತ ಜಿಲ್ಲೆಯ ಹರಿಕಾರನೆಂದು ಪ್ರಸಿದ್ಧಿ ಪಡೆದ ಸೇವಾದಳ ಸಂಘಟಕ ಲಯನ್ ಸುರೇಶ್ ಶೆಟ್ಟಿ ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.ಅವರಿಗೆ 72 ವರ್ಷ ವಯಸ್ಸಾಗಿತ್ತು. ಮಂಗಳೂರಿನ ಜೆಪ್ಪು ಮಾರ್ಕೆಟ್ ರೋಡ್, ಗರೋಡಿ ಕಂಪೌಂಡ್ ನಿವಾಸಿಯಾಗಿದ್ದ ಸುರೇಶ್ ಶೆಟ್ಟಿ ಅವರು ರೆಡ್ ಕ್ರಾಸ್ ಸಂಸ್ಥೆ, ಭಾರತ ಸೇವಾದಳ, ರಾನಮಕೃಷ್ಣ ಆಶ್ರಮ ಸ್ವಚ್ಛತಾ ಆಂದೋಲನ, ಮಂಗಳೂರು ಮಹಾನಗರಪಾಲಿಕೆ ಮಲೇರಿಯಾ ಜಾಗೃತಿ, ಪರಿಸರಾಸಕ್ತರ ಒಕ್ಕೂಟದ ಸಕ್ರಿಯ ಕಾರ್ಯಕರ್ತರಾಗಿದ್ದರು.

ವೃತ್ತಿಯಲ್ಲಿ ಭಾರತೀಯ ಜೀವ ವಿಮಾ ಏಜೆಂಟ್ ಆಗಿದ್ದು, ಸದಾ ಸಮಾಜ ಸೇವೆಯಲ್ಲಿ ನಿರತರಾಗಿದ್ದರು. ಎರಡು ಬಾರಿ ಯುವ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷರಾಗಿದ್ದ ಸುರೇಶ್ ಶೆಟ್ಟಿ, ಸೇವಾದಳ ಸಂಘಟಕರಾಗಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಯಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.

ಕುಟುಂಬದ ಜತೆಯಾಗಿ ವಿಹಾರಕ್ಕೆ ತೆರಳಿದ್ದಾಗ ಹೃದಯಾಘಾತವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಅವರು ಮಡದಿ, ಇಬ್ಬರು ಮಕ್ಕಳು, ಮೊಮ್ಮಕ್ಕಳು ಮತ್ತು ಅಪಾರ ಸ್ನೇಹಿತರನ್ನು ಅಗಲಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳದ ಮುಖ್ಯಸ್ಥರಾದ ಸುರೇಶ್ ಶೆಟ್ಟಿ ಅವರ ಪಾರ್ಥಿವ ಶರೀರ ಇಂದು ಸಂಜೆ ವೇಳೆಗೆ ಮಂಗಳೂರಿನ ಜೆಪ್ಪು ಮಾರ್ಕೆಟ್ ರಸ್ತೆ ಬಳಿ ಗರೋಡಿ ಕಾಂಪೌಂಡ್ ನಲ್ಲಿರುವ ಅವರ ಸ್ವ ಗೃಹಕ್ಕೆ ಆಗಮಿಸಲಿದ್ದು, ಬಳಿಕ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ನಾಳೆ (14/03/2021) ರವಿವಾರ ಬೆಳಿಗ್ಗೆ 10:00 ಗಂಟೆ ವೇಳೆಗೆ ಸ್ವಗೃಹದಿಂದ ಹೊರಟು ನಂದಿ ಗುಡ್ಡೆ ರುದ್ರ ಭೂಮಿಯಲ್ಲಿ ಧಾರ್ಮಿಕ ವಿಧಿವಿಧಾನದಂತೆ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ.

ನಾಯಕರ ಅಕಾಲಿಕ ನಿಧನಕ್ಕೆ ಕಾಂಗ್ರೆಸ್ ಕಂಬನಿ….

ಹಿರಿಯ ಕಾಂಗ್ರೆಸ್ ಮುಖಂಡರು, ದ.ಕ.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸದಾನಂದ ಪೂಂಜಾ ಹಾಗೂ ದ.ಕ.ಜಿಲ್ಲಾ ಸೇವಾದಳದ ಮುಖ್ಯಸ್ಥ ಸುರೇಶ್ ಶೆಟ್ಟಿ ಅವರ ನಿಧನಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ.

ಧೀರ್ಘ ಕಾಲ ಪಕ್ಷದಲ್ಲಿ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಜನಾನುರಾಗಿಯಾಗಿದ್ದ ಸದಾನಂದ ಪೂಂಜಾ ಹಾಗೂ ಸುರೇಶ್ ಶೆಟ್ಟಿ ಅವರು ವಿಧಿವಶರಾದ ಸುದ್ದಿ ನೋವು ತಂದಿದ್ದು, ಜಿಲ್ಲಾ ಕಾಂಗ್ರೆಸ್ ಗೆ ತುಂಬಲಾರದ ನಷ್ಟ. ಸಮಾಜದ ಎಲ್ಲ ವರ್ಗದ ಜನರ ಸರ್ವಾಂಗೀಣ ಏಳಿಗೆಗೆ ಶ್ರಮಿಸಿದ ಇವರಿಬ್ಬರ ನಿಧನದಿಂದ ಸಜ್ಜನ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ.

ಅವರ ಕುಟುಂಬ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕ ಯು.ಟಿ.ಖಾದರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕರಾದ ಮೊಹಮ್ಮದ್ ಮಸೂದ್, ವಸಂತ್ ಬಂಗೇರಾ, ಐವನ್ ಡಿಸೋಜಾ, ಮೊಯ್ದೀನ್ ಬಾವಾ, ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಮ.ನ.ಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಮಿಥುನ್ ರೈ, ಹಾಜಿ ಕೋಡಿಜಾಲ್ ಇಬ್ರಾಹೀಂ, ಕಣಚೂರ್ ಮೋನು, ತಾ.ಪಂ.ಅಧ್ಯಕ್ಷ ಮಲಾರ್ ಮೋನು, ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್, ಕವಿತಾ ಸನಿಲ್, ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಡಾ.ಶಕೀಲ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ನಝೀರ್ ಬಜಾಲ್, ಶಾಲೆಟ್ ಪಿಂಟೊ, ಬ್ಲಾಕ್ ಅಧ್ಯಕ್ಷರುಗಳಾದ ಜೆ.ಅಬ್ದುಲ್ ಸಲೀಂ, ಪ್ರಕಾಶ್ ಸಾಲಿಯಾನ್, ಸದಾಶಿವ ಶೆಟ್ಟಿ, ಸುರೇಂದ ಕಂಬಳಿ, ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಎನ್.ಎಸ್ ಕರೀಂ, ಮೊಹಮ್ಮದ್ ಕುಂಜತ್ತಬೈಲ್, ಸಂತೋಷ್ ಕುಮಾರ್ ಶೆಟ್ಟಿ, ಶಬ್ಬೀರ್.ಎಸ್, ಯು.ಬಿ.ಸಲೀಂ, ಬಿ.ಎಚ್.ಖಾದರ್, ನೀರಜ್ ಚಂದ್ರ ಪಾಲ್, ಟಿ.ಕೆ.ಸುಧೀರ್, ಶುಭೋದಯ ಆಳ್ವ ರವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

 

DAKSHINA KANNADA

ಮಂಗಳೂರು : ಮೇ 25 ರಂದು ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ

Published

on

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಮಂಗಳೂರು ಮತ್ತು ನಾರಾಯಣ ಗುರು ಕಾಲೇಜು ಇದರ ಆಶ್ರಯದಲ್ಲಿ ಕೆ.ಎಮ್.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಸಹಕಾರದಿಂದ ಹಿಂದುಳಿದ ಸಮಾಜದ ಸಾಮಾಜಿಕ ಕ್ರಾಂತಿಯ ಹರಿಕಾರ ದಿ.ದಾಮೋದರ ಆರ್.ಸುವರ್ಣ ಜನ್ಮಶತಾಬ್ದಿ ಪ್ರಯುಕ್ತ ಮೇ 25 ರಂದು ಕುದ್ರೋಳಿ ನಾರಾಯಣ ಗುರು ಕಾಲೇಜಿನ ದಾಮೋದರ ಆರ್.ಸಭಾಂಗಣದಲ್ಲಿ ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆ ತನಕ ಈ ಕಾರ್ಯಕ್ರಮ ನಡೆಯಲಿದೆ.


ವೈದ್ಯಕೀಯ ಶಿಬಿರದಲ್ಲಿ ಕಣ್ಣು, ಕಿವಿ, ಮೂಗು, ಗಂಟಲು, ಎಲುಬು, ಕೀಲು ಮತ್ತು ಸಾಮಾನ್ಯ ರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ರೀಡಿಂಗ್ ಕನ್ನಡಕ ಅಗತ್ಯ ಇದ್ದವರಿಗೆ ಉಚಿತವಾಗಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವವರಿಗೆ ಕೆ.ಎಮ್.ಸಿ.ಯ ಹಸಿರು ಕಾರ್ಡ್ ನೀಡಲಾಗುವುದು.

ಇದನ್ನೂ ಓದಿ : ಟಿ 20 ವಿಶ್ವಕಪ್ ಗೆ ಲಗ್ಗೆಯಿಟ್ಟ ‘ನಂದಿನಿ’; ಕ್ರಿಕೆಟಿಗರ ಜೆರ್ಸಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌

ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಬೇಕು. ಅದೇ ರೀತಿ ರಕ್ತದಾನದಲ್ಲೂ ಸ್ವಯಂ ಸ್ಪೂರ್ತಿಯಿಂದ ಭಾಗವಹಿಸಬೇಕೆಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Continue Reading

DAKSHINA KANNADA

ಈ 7 ರೈಲು ನಿಲ್ದಾಣಗಳಲ್ಲಿ ಸಿಗುತ್ತೆ ಅತೀ ಕಡಿಮೆ ಬೆಲೆಗೆ ತಿಂಡಿ, ಊಟ

Published

on

ಮಂಗಳೂರು: ಭಾರತೀಯ ರೈಲ್ವೆ ಮಂಡಳಿಯು ಕರ್ನಾಟಕದ ಏಳು ನಿಲ್ದಾಣಗಳು ಸೇರಿದಂತೆ ದೇಶದ 100ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ಕಂಪಾರ್ಟ್ಮೆಂಟ್ ಕೋಚ್‌ಗಳ ಬಳಿ ಕಡಿಮೆ ದರದಲ್ಲಿ ಉತ್ತಮ ಆಹಾರವನ್ನು ಒದಗಿಸುವ ಕೌಂಟರ್‌ಗಳನ್ನು ತೆರೆದಿದೆ.

ಕರ್ನಾಟಕದಲ್ಲಿ ದಕ್ಷಿಣ ರೈಲ್ವೆ ಅಡಿಯಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೆ ವಿಭಾಗಗಳಲ್ಲಿ ಸಬ್ಸಿಡಿ ಆಹಾರ ಕೌಂಟರ್‌ಗಳನ್ನು ತೆರೆಯಲಾಗಿದೆ. ಹಾಗೆಯೇ ನೈರುತ್ಯ ರೈಲ್ವೆಯ ಅಡಿಯಲ್ಲಿ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಲ್ಲಿ ಈ ಆಹಾರ ಕೌಂಟರ್‌ಗಳನ್ನು ತೆರೆಯಲಾಗಿದೆ.

ಈ ಯೋಜನೆಯು ಭಾರತೀಯ ರೈಲ್ವೆಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಮತ್ತು ಭಾರತೀಯ ರೈಲ್ವೆಯ ಜಂಟಿ ಉಪಕ್ರಮವಾಗಿದೆ. ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆರೋಗ್ಯಕರ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಹಿಂದೆ ಜನತಾ ಊಟದ ಸೇವೆಯ ಅಡಿಯಲ್ಲಿ ರೈಲ್ವೆ ನಿಲ್ದಾಣದ ರೆಸ್ಟೋರೆಂಟ್‌ಗಳಲ್ಲಿ ಕಡಿಮೆ ದರದ ಆಹಾರ ಲಭ್ಯವಿತ್ತು. ಈಗ ಕೌಂಟರ್‌ಗಳು ನೇರವಾಗಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ.

ಪ್ರಸ್ತುತ 100 ರೈಲು ನಿಲ್ದಾಣಗಳಲ್ಲಿ 150 ಪ್ಲಾಟ್ಫಾರ್ಮ್ಗಳು ಈ ಸೌಲಭ್ಯವನ್ನು ನೀಡುತ್ತವೆ. ಬೆಳಗಿನ ಉಪಹಾರ 20 ರೂ., ಲಘು ಊಟ 50 ರೂ., 3 ರೂ.ಗೆ 200 ಎಂಎಲ್ ನೀರು ನೀಡಲಾಗುತ್ತದೆ. ಈ ಮಾಹಿತಿಯನ್ನು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಒಟ್ಟಾರೆ ಈ ಯೋಜನೆಯು ರೈಲು ಪ್ರಯಾಣಿಕರ ಆಹಾರ ಸಮಸ್ಯೆಯನ್ನು ಪರಿಹರಿಸಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

Continue Reading

DAKSHINA KANNADA

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: ಮೇ 19, 20ರಂದು ಆರೆಂಜ್ ಅಲರ್ಟ್‌

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೇ 18 ರಿಂದ 21 ರವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 19 ಮತ್ತು 20 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಆರೆಂಜ್ ಅಲರ್ಟ್‌ ಇರುವ ದಿನಗಳಲ್ಲಿ ಮಿಂಚು, ಗುಡುಗು, ಸಿಡಿಲುಗಳಿಂದ ಕೂಡಿದ ಭಾರಿ ಮಳೆಯಾಗಲಿದೆ. ಜಿಲ್ಲೆಯ ಕೆಲವೆಡೆ 11.55 ಸೆಂ.ಮೀ ನಿಂದ 20.44 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇದೇ 18 ಮತ್ತು 21ರಂದು ಜಿಲ್ಲೆಯಲ್ಲಿ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಕೆಲವೆಡೆ 6.45 ಸೆಂ.ಮೀ ನಿಂದ 11.55 ಸೆಂ.ಮೀವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Continue Reading

LATEST NEWS

Trending