ಕಾರ್ಕಳ: ಒಡಹುಟ್ಟಿದ ಅಣ್ಣ-ತಮ್ಮ ಒಂದೇ ದಿನ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಕಾರ್ಕಳದಲ್ಲಿ ನಿನ್ನೆ ನಡೆದಿದೆ.
ಕರಿಯಕಲ್ಲು ನಿವಾಸಿ ರಾಜಾರಾಮ ರಾವ್ (55) ಹಾಗೂ ಗಣೇಶ್ ರಾವ್ (60) ಎಂದು ಗುರುತಿಸಲಾಗಿದೆ. ಜೂ. 14ರ ಮುಂಜಾನೆ ರಂದು ರಾಜಾರಾಮ್ ಜಾರ್ಕಳದಲ್ಲಿ ನಡೆದ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೇ ವೇಳೆ ಜಾಂಡಿಸ್ ಹಾಗೂ ಕೋವಿಡ್ ಕಾರಣಕ್ಕೆ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಣ್ಣಾ ಗಣೇಶ್ ರಾವ್ ಸಂಜೆ ವೇಳೆ ಇಹ ಲೋಕ ತ್ಯಜಿಸಿದರು.
ವೃತ್ತಿಯಲ್ಲಿ ಟೈಲರಿಂಗ್ ಹಾಗೂ ಟೆಂಪೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜಾರಾಮ್ ಕರಿಯಕಲ್ಲುವಿನ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸುತ್ತಿದ್ದರು. ಕಳೆದೆರಡು ದಶಕಗಳಿಂದ 10 ಸಾವಿರಕ್ಕೂ ಹೆಚ್ಚು ಮೃತದೇಹಗಳಿಗೆ ಅಂತಿಮ ಸಂಸ್ಕಾರ ನೆರವೇರಿಸುತ್ತಿದ್ದರು. ಕೊರೋನಾದಿಂದ ಮೃತಪಟ್ಟ 40ಕ್ಕೂ ಅಧಿಕ ಮೃತದೇಹಕ್ಕೆ ಮುಕ್ತಿ ನೀಡಿದ್ದಾರೆ. ನಾಸಿಕ್‌ನಲ್ಲಿ ವ್ಯವಹಾರ ನಡೆಸುತ್ತಿದ್ದ ಗಣೇಶ್ ರಾವ್ ಇತ್ತೀಚೆಗೆ ಊರಿನಲ್ಲಿ ಕೃಷಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು.