ಮುಂಬೈ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ಸುನಂದಾ ಶೆಟ್ಟಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸುನಂದಾ ಅವರ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಸುನಂದಾ ಅವರು
ಏ.12 ರಂದು ತಮ್ಮ ವಕೀಲರೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ ವಾರೆಂಟ್ ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಸುನಂದಾ ಅವರ ಮನವಿಯನ್ನು ಅಂಗೀಕರಿಸಿದ್ದು, 15,000 ಸಾವಿರ ರೂ ವೈಯುಕ್ತಿಕ ಬಾಂಡ್ ಪಡೆದು ಜಾಮೀನು ನೀಡಿದೆ.
ಮುಂಬೈನ ಉದ್ಯಮಿ ಫರ್ಹಾದ್ ಅಮ್ರಾ ಅವರ ಬಳಿ ಪಡೆದಿದ್ದ 21 ಲಕ್ಷ ಸಾಲದ ಹಣವನ್ನು ಮರುಪಾವತಿ ಮಾಡದ ಆರೋಪದ ಮೇಲೆ ಸುನಂದಾ ಶೆಟ್ಟಿ ಕುಟುಂಬದ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
2015ರಲ್ಲಿ ಶಿಲ್ಪಾ ಅವರ ತಂದೆ ಸುರೇಂದ್ರ ಶೆಟ್ಟಿ, ಫರ್ಹಾದ್ ಅವರಿಂದ ಹಣ ಸಾಲ ಪಡೆದಿದ್ದರು. 2017ರ ಜನವರಿಯೊಳಗೆ ಈ ಹಣವನ್ನು ಮರುಪಾವತಿ ಮಾಡಬೇಕಾಗಿತ್ತು.
ಆದರೆ, 2016ರಲ್ಲಿ ಸುರೇಂದ್ರ ನಿಧನರಾದರು. ಸಾಲ ಮರು ಪಾವತಿ ಮಾಡುವುದಕ್ಕೂ ಮುನ್ನವೇ ಸುರೇಂದ್ರ ನಿಧನರಾದ್ದರಿಂದ, ಸಾಲದ ಹೊಣೆ ಸುನಂದಾ,
ಶಿಲ್ಪಾ, ಶಮಿತಾ ಅವರ ಮೇಲಿತ್ತು. ಆದರೆ, ತಾವು ಹಣ ಪಡೆದಿಲ್ಲವೆಂದು ಸಾಲ ಮರುಪಾವತಿಸಲು ನಿರಾಕರಿಸಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.