ಉಡುಪಿ: ಇದುವರೆಗೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಷ್ಟೇ ಕೇಳಿ ಬರುತ್ತಿದ್ದ ಸ್ಯಾಟಲೈಟ್ ಫೋನ್ ಕರೆ ಈಗ ದೇವಾಲಯಗಳ ನಗರಿ ಉಡುಪಿ ಜಿಲ್ಲೆಯಲ್ಲೂ ಮೊಳಗಿದೆ. ಉಡುಪಿಯಲ್ಲೂ ಉಗ್ರರ ಕರಿನೆರಳು ಕಾಣಿಸಿದೆ.
ಉಡುಪಿಯ ಮಂದಾರ್ತಿ ಸಮೀಪದ ಅರಣ್ಯ ಪ್ರದೇಶದಲ್ಲಿ ಸಕ್ರಿಯಗೊಂಡ ಸ್ಯಾಟಲೈಟ್ ಫೋನ್ ಬಗ್ಗೆ ಇದೀಗ ರಾಜ್ಯ ಆಂತರಿಕ ಭದ್ರತಾ ವಿಭಾಗದಿಂದ ಜಿಲ್ಲಾ ಆಂತರಿಕ ವಿಭಾಗಕ್ಕೆ ಮಾಹಿತಿ ರವಾನಿಸಲಾಗಿದ್ದು, ಉಡುಪಿ ಜಿಲ್ಲಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ತುರಾಯ್ ಸ್ಯಾಟಲೈಟ್ ಕರೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನವೆಂಬರ್ 9ರಂದು ಸಕ್ರಿಯಗೊಂಡಿದ್ದ ಸ್ಯಾಟಲೈಟ್ ಫೋನ್ ಕರೆ ಇದಾಗಿದ್ದು, ಮಂದಾರ್ತಿ ದೇವಸ್ಥಾನದಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿ ಆ್ಯಕ್ಟಿವ್ ಆಗಿದೆ ಎನ್ನಲಾಗಿದ್ದು, ಇಲ್ಲಿನ ಗೇರುಬೀಜ ಕಾರ್ಖಾನೆ ಬಳಿಯ ಲೊಕೇಶನ್ ಟ್ರೇಸ್ ಆಗಿದೆ.
2020 ರಲ್ಲೂ ಜಿಲ್ಲೆಯಲ್ಲಿ ಸ್ಯಾಟಲೈಟ್ ಸದ್ದು ಮಾಡಿತ್ತು . 2020 ರಲ್ಲಿ ಜಿಲ್ಲೆಯ ಕೊಲ್ಲೂರು, ಜಡ್ಡಿನಗುಡ್ಡೆ, ಹೆರ್ಮುಂಡೆ ಭಾಗದಲ್ಲಿ ಆಕ್ಟೀವ್ ಆಗಿದ್ದ ಫೋನ್ ಬಗ್ಗೆ ಪರಿಶೀಲನೆ ನಡೆಸಲು ಪೊಲೀಸರು ಸ್ಥಳಕ್ಕೆ ತೆರಳಿದ್ದರೂ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಈ ನಡುವೆ ಉಗ್ರ ಶಾರೀಕ್ ಉಡುಪಿಗೂ ಬಂದಿದ್ದ ಎಂದು ತಿಳಿದು ಬಂದಿದೆ.
ಉಡುಪಿಯ ಕೃಷ್ಣ ಮಠ ಶಾರಿಕ್ ಟಾರ್ಗೆಟ್ ಆಗಿತ್ತಾ ? ಎಂಬ ಪ್ರಶ್ನೆ ಪೊಲೀಸರಿಗೆ ಮೂಡಿದೆ. ಈ ಹಿನ್ನೆಲೆಯಲ್ಲಿ ರಥ ಬೀದಿಗೆ ಬಂದು ಮಂಗಳೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಕ್ಟೋಬರ್ 11ರಂದು ಕೃಷ್ಣಮಠ ಹಾಗೂ ರಥಬೀದಿಯಲ್ಲಿ ಸುತ್ತಾಡಿದ ಬಗ್ಗೆ ಪೊಲೀಸರಲ್ಲಿ ಶಂಕೆ ಮೂಡಿದೆ.
ರಥಬೀದಿಯಿಂದ ಮಾಡಿದ ಮೊಬೈಲ್ ಫೋನ್ ಕರೆಯಿಂದ ವಿಷಯ ಬಯಲಿಗೆ ಬಂದಿದೆ. ಇಲ್ಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಲು ಬಂದಿದ್ದ ಮಂಗಳೂರು ಪೊಲೀಸರು ಆದರೆ ಅವರಿಗೆ ಯಾವುದೇ ದೃಶ್ಯಾವಳಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.