ಮಂಗಳೂರು: ಮಂಗಳೂರು ನಗರ ಹೊರವಲಯದ ದೇರಳಕಟ್ಟೆ ಅಡ್ಕರಮಜಲು ಬೆಳ್ಮದ ಬೋಲ್ದನ್ ಕುಟುಂಬಿಕರ ತರವಾಡಿನ ಮನೆಯಲ್ಲಿ ಪಂಜುರ್ಲಿ, ಕಲ್ಲುರ್ಟಿ , ಗುಳಿಗ ದೈವಗಳ ನರ್ತನ ಸೇವೆ ವೈಭವದಿಂದ ಜರುಗಿತು.
ನವೆಂಬರ್ 24ರಂದು ಬೆಳಿಗ್ಗೆ ತರವಾಡು ಮನೆಯಲ್ಲಿ ನಾಗದೇವರಿಗೆ ನಾಗತಂಬಿಲ, ಬಳಿಕ ಗಣಹೋಮ, ಶ್ರೀ ವೆಂಕಟ್ರಮಣ ದೇವರ ಮುಡಿಪು ಕಟ್ಟುವಿಕೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳನ್ನು ಅಂಬ್ಲಮೊಗರಿನ ಪ್ರಶಾಂತ್ ಉಡುಪ ಅವರು ನೆರವೇರಿಸಿದರು. ಅದೇ ದಿನ ರಾತ್ರಿ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳ ಕೋಲೋತ್ಸವ ಜರುಗಿತು. ಮರುದಿನ ರಾತ್ರಿ ದೈವಗಳಿಗೆ ತಂಬಿಲ ನಡೆಯಿತು.
ತರವಾಡು ಕುಟುಂಬದ ತಲಪಾಡಿ, ಬೊಳ್ಮ, ಬಾಳೇಪುಣಿ, ಕಡಂಬಾರು, ಕಡಬ- ಧರ್ಮಸ್ಥಳ, ಇನೋಳಿ ಕುಟುಂಬಿಕರ ಪ್ರತೀ ಸದಸ್ಯರು, ಊರ, ಪರವೂರಿನ ಭಕ್ತರೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಐತಪ್ಪ, ಮೋಹಿನಿ ಬೆಳ್ಮ, ಸಮಿತಿ ಅಧ್ಯಕ್ಷರಾದ ದಯಾನಂದ ಬೆಳ್ಮ, ಉಪಾಧ್ಯಕ್ಷ ಚಂದ್ರಶೇಖರ ಅರಿಬೈಲು, ಕಾರ್ಯದರ್ಶಿ ಆನಂದ ಕಡಬ, ಖಜಾಂಚಿ ದಿನಕರ್, ಗೌರವ ಸಲಹೆಗಾರರಾದ ವಿಶ್ವನಾಥ ಕಡಬ, ಧರ್ಣಪ್ಪ ಮಾಸ್ಟರ್ ಧರ್ಮಸ್ಥಳ ಉಪಸ್ಥಿತರಿದ್ದರು.
ತರವಾಡಿನ ಮನೆಗೆ ನೂತನವಾಗಿ ನಿರ್ಮಿಸಲಾದ ಶೌಚಾಲಯಕ್ಕೆ ಆರ್ಥಿಕ ಸಹಕಾರ ನೀಡಿದ ಎಲ್ಲಾ ದಾನಿಗಳನ್ನು, ಕೊಡುಗೆ ನೀಡಿದವರಿಗೆ ಹಾಗೂ ವಿಶೇಷವಾಗಿ ನೆರವು ನೀಡಿದ ಚಿದಾನಂದ ಮೇಸ್ತ್ರಿ ಮಾಡೂರು, ಶ್ರಮದಾನದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಅಧ್ಯಕ್ಷ ದಯಾನಂದ ಬೆಳ್ಮ ಅಭಿನಂದನೆ ಸಲ್ಲಿಸಿದರು. ಕಾರ್ಯದರ್ಶಿ ಆನಂದ ಕಡಬ ಖರ್ಚು ವೆಚ್ಚಗಳ ವರದಿ ಮಂಡಿಸಿದರು.