ಬೆಂಗಳೂರು: ಬಿಜೆಪಿಯವರು ಬೆಳಗ್ಗೆ ಎದ್ದರೆ ಹಿಂದೂ ಹಿಂದೂ ಅನ್ನುತ್ತಾರೆ. ಈಗ ಹಿಂದೂ ದೇಗುಲಗಳನ್ನೇ ಒಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಕಿಡಿಕಾರಿದರು.
ಅನಧಿಕೃತ ನಿರ್ಮಾಣವಾಗಿವೆ ಎಂಬ ನೆಪದಲ್ಲಿ ರಾಜ್ಯದಲ್ಲಿ ನೂರಾರು ದೇಗುಲಗಳನ್ನ ಧ್ವಂಸ ಮಾಡುವ ಕಾರ್ಯ ವಿವಾದಕ್ಕೀಡು ಮಾಡಿದೆ. ಈ ಕುರಿತು ವಿಧಾನಸೌಧದಲ್ಲಿ ಇಂದು ಮಾತನಾಡಿದ ರೇವಣ್ಣ, ನಂಜನಗೂಡು ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸ ಇದೆ. ಪುರಾತನ ಕಾಲದಲ್ಲಿ ದೇಗುಲ ನಿರ್ಮಿಸಲಾಗಿದೆ.
ಇದ್ಯಾವುದನ್ನೂ ಪರಿಗಣಿಸದೆ ದೇಗುಲ ನೆಲಸಮ ಮಾಡುವುದು ಎಷ್ಟು ಸರಿ? ಸುಮ್ಮನೆ ಹಿಂದೂ ಎಂದರೆ ಸಾಲದು ಎಂದು ಆಕ್ರೋಶ ಹೊರಹಾಕಿದರು.
ಸುಪ್ರೀಂ ಕೋರ್ಟಿನ ಆದೇಶವನ್ನ ಪಾಲಿಸಲಿ. ಆದರೆ, ಆಯಾ ದೇವಸ್ಥಾನ ಸಮಿತಿ ಜತೆ ಚರ್ಚಿಸಬೇಕು.
ಪರ್ಯಾಯ ದೇವಸ್ಥಾನ ನಿರ್ಮಿಸಿ ಆನಂತರ ತೆರವು ಮಾಡಲಿ. ಸುಮ್ಮನೆ ಏಕಾಏಕಿ ದೇಗುಲ ತೆರವು ಮಾಡಿದರೆ ಭಕ್ತರ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ ಎಂದರು.