ಉಡುಪಿ: ಕಾಪುವಿನ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿ ಇಲಾಖೆಯು ಕಾಮಗಾರಿ ನಿಧಾನ ಗತಿಯಲ್ಲಿ ನಡೆಸುತ್ತಿರುವುದರಿಂದ ಆ ಪ್ರದೇಶದ ಸ್ಥಳೀಯ ನಿವಾಸಿ ಪ್ರಕಾಶ್ ದೇವಾಡಿಗ ಅವರ ಮನೆಗೆ ಕೃತಕ ನೆರೆ ನೀರು ನುಗ್ಗಿದೆ.
ಉಚ್ಚಿಲ ಪೆಟ್ರೋಲ್ ಪಂಪ್ ನಿಂದ ಪೋಸ್ಟ್ ಆಫೀಸ್ ವರೆಗೆ ಎರಡು ಕಿಲೋಮೀಟರ್ ಉದ್ದದ ಸರ್ವಿಸ್ ರಸ್ತೆ ನಿರ್ಮಾಣ ಆಗುತ್ತಿದ್ದು, ಇಲ್ಲಿ ಕಳೆದ ಒಂದು ವರ್ಷದಿಂದ ಆರಂಭವಾದ ಎರಡು ಕಿಲೋಮೀಟರ್ ಸರ್ವಿಸ್ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಹೆದ್ದಾರಿಯ ಇಕ್ಕೆಲಗಳಲ್ಲಿ ಗುತ್ತಿಗೆದಾರರು ರಸ್ತೆಗಳನ್ನು ಅಗೆದು ಹಾಕಿದ್ದು , ಮಳೆ ನೀರು ಸಾಗುವ ಹಾದಿಯನ್ನು ಮುಚ್ಚಿದ್ದಾರೆ.
ಇದರಿಂದಾಗಿ ಮಳೆ ನೀರು ಹೆದ್ದಾರಿ ಪಕ್ಕದ ಮನೆಗಳಿಗೆ ನುಗ್ಗುತ್ತಿದೆ.
ಕಾಮಗಾರಿ ಪೂರ್ಣಗೊಳಿಸದ ಕಾರಣ ಹೆದ್ದಾರಿ ಪಕ್ಕದಲ್ಲಿ ಸಂಚರಿಸುವ ವಾಹನ ಸವಾರರಿಗೆ, ಪಾದಾಚಾರಿಗಳಿಗೆ ಜೀವ ಭಯ ಉಂಟಾಗಿದೆ.
ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಜೆಸಿಬಿ ಮೂಲಕ ರಸ್ತೆ ನಿರ್ಮಿಸಿ ಕೊಟ್ಟು , ನೀರು ಹರಿಯಲು ದಾರಿ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.