Connect with us

DAKSHINA KANNADA

ಪುತ್ತೂರು: ಅ.26ಕ್ಕೆ ರೈ ಎಸ್ಟೇಟ್ ಎಜ್ಯುಕೇಶನ್ & ಚಾರಿಟೇಬಲ್ ಟ್ರಸ್ಟ್‌ನ ದಶಮಾನೋತ್ಸವ ಸಮಾರಂಭ

Published

on

ಪುತ್ತೂರು: ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಅಕ್ಟೋಬರ್ 26ರಂದು ನಡೆಯಲಿರುವ ರೈ ಎಸ್ಟೇಟ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ದಶಮಾನೋತ್ಸವ, ಫಲಾನುಭವಿಗಳ ಸಮಾವೇಶ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತದ ವಸ್ತ್ರ ವಿತರಣಾ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಟ್ರಸ್ಟ್‌ನ ಪ್ರವರ್ತಕರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕೆ.ಎಸ್. ಮನವಿ ಮಾಡಿದರು.


ಮರೀಲ್‌ನಲ್ಲಿರುವ ಪುತ್ತೂರು ಕ್ಲಬ್‌ನಲ್ಲಿ ಅ.8ರಂದು ರಾತ್ರಿ ನಡೆದ ಕಾರ್ಯಕ್ರಮದ ಸಮಾಲೋಚನಾ ಸಭೆ ಮತ್ತು ಸ್ನೇಹಕೂಟದಲ್ಲಿ ಮಾತನಾಡಿದ ಅಶೋಕ್ ರೈಯವರು ಕಾರ್ಯಕ್ರಮದ ರೂಪುರೇಷೆಯ ಕುರಿತು ಮಾಹಿತಿ ನೀಡಿದರು.

ಪ್ರತೀ ವರ್ಷ ದೀಪಾವಳಿಯಂದು ಕೋಡಿಂಬಾಡಿಯಲ್ಲಿರುವ ನಮ್ಮ ರೈ ಎಸ್ಟೇಟ್‌ನಲ್ಲಿ ವಸ್ತ್ರ ವಿತರಣೆ ಮಾಡಲಾಗುತ್ತಿತ್ತು. ಈಗ ರಸ್ತೆ ಅಗಲೀಕರಣದಿಂದಾಗಿ ಮನೆಯಂಗಳ ಕಿರಿದಾಗಿದೆ.

ಹಾಗಾಗಿ ಅಲ್ಲಿ ದೊಡ್ಡ ಕಾರ್ಯಕ್ರಮ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಕಿಲ್ಲೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ ಅವರು ಕಿಲ್ಲೆ ಮೈದಾನದಲ್ಲಿ ನಡೆಯುವ ಟ್ರಸ್ಟ್‌ನ ದಶಮಾನೋತ್ಸವ, ಫಲಾನುಭವಿಗಳ ಸಮಾವೇಶ, ಸನ್ಮಾನ, ಸಾಂಸ್ಕೃತಿಕ ಮುಂತಾದ ಕಾರ್ಯಕ್ರಮದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಗೆ ಪ್ರಾರಂಭಗೊಳ್ಳಲಿದೆ.

ಪ್ರಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ ಜರಗಲಿದೆ. 11 ಗಂಟೆಯಿಂದ ಅನ್ನಸಂತರ್ಪಣೆ ಪ್ರಾರಂಭಗೊಳ್ಳಲಿದೆ.

ಕಳೆದ ಎರಡು ವರ್ಷಗಳಲ್ಲಿ ಕೊರೋನಾದಿಂದಾಗಿ ವಸ್ತ್ರ ವಿತರಣೆ ಸಾಧ್ಯವಾಗಿಲ್ಲ. ಹೀಗಾಗಿ ಈ ವರ್ಷ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದು ಸುಮಾರು 26 ಸಾವಿರ ಮಂದಿಗೆ ವಸ್ತ್ರ ವಿತರಿಸಲಾಗುವುದು.

ಅಲ್ಲದೆ ಹೆಚ್ಚುವರಿಯಾಗಿ 5000 ಮಂದಿಗೆ ಬೇಕಾದಷ್ಟು ವಸ್ತ್ರ ಸಂಗ್ರಹಿಸಿಡಲಾಗುವುದು ಎಂದು ತಿಳಿಸಿದ ಅಶೋಕ್ ರೈಯವರು, ಈ ಎಲ್ಲಾ ಕಾರ್ಯಕ್ರಗಳ ಯಶಸ್ಸಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರಲ್ಲದೆ ದೊಡ್ಡ ಪ್ರಮಾಣದಲ್ಲಿ ನಡೆಯುವ ಈ ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರೂ ಕೈ ಜೋಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗೂಡುದೀಪ ಸ್ಪರ್ಧೆ ಆಯೋಜಿಸಲಾಗಿದ್ದು, ಬೆಳಿಗ್ಗೆ 6.30ಕ್ಕೆ ಸ್ಪರ್ಧೆ ನಡೆಯಲಿದೆ. ಮನೆಯಲ್ಲಿ ತಯಾರಿಸಿದ ಗೂಡುದೀಪಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ ಅವರು ಕಾರ್ಯಕ್ರಮದಲ್ಲಿ ಅಡಿಕೆ ಕೊಯ್ಯುವವರು, ಬುಟ್ಟಿ ಹೆಣೆಯುವವರು, ಪೋಸ್ಟ್‌ಮೆನ್, ಪವರ್‌ಮೆನ್, ಆಟೋ ಚಾಲಕ, ಬೀಡಿ ಹಾಗೂ ಹೈನುಗಾರಿಕೆಯಲ್ಲಿ ಕುಟುಂಬ ನಿರ್ವಹಣೆ ಮಾಡುವಂತಹ ಸ್ವಾಭಿಮಾನಿ ಬಡವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ನಮ್ಮ ಟ್ರಸ್ಟ್‌ನಿಂದ 10 ವರ್ಷಗಳಲ್ಲಿ 15800 ಮನೆಗೆ ನೇರ ಧನಸಹಾಯ ನೀಡಲಾಗಿದೆ. ನಮ್ಮ ಟ್ರಸ್ಟ್ ದೇಣಿಗೆ ನೀಡಿರುವುದೇ ಹೊರತು ಯಾರಿಂದಲೂ ನಾವು ದೇಣಿಗೆ ಪಡೆದುಕೊಂಡಿಲ್ಲ. ನಮ್ಮ ಸಂಪಾದನೆಯ ಒಂದು ಪಾಲು ಬಡವರ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ.

ಮನೆಯಿಲ್ಲದವರಿಗೆ ವಾಸಕ್ಕೆ ಯೋಗ್ಯವಾದ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಮಾಸಾಶನ ಪಡೆಯುವವರಿಗೆ ಸಹಕಾರ ನೀಡಲಾಗಿದೆ, ವಿದ್ಯುತ್, ನೀರಿನ ಸಂಪರ್ಕವಿಲ್ಲದವರಿಗೆ ಸೌಲಭ್ಯ ಒದಗಿಸಲಾಗಿದೆ, ಮನೆ ಕಟ್ಟಲು ನಾನಾ ಕಾರಣಗಳಿಂದ ವಂಚಿತರಾಗಿದ್ದವರಿಗೆ ಮನೆ ನಿರ್ಮಿಸಲು ಸಹಕಾರ ನೀಡಲಾಗಿದೆ, ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಒದಗಿಸಿಕೊಡಲಾಗಿದೆ.

ಇಂತಹ ಕಾರ್ಯಕ್ಕಾಗಿ ದರ್ಬೆಯಲ್ಲಿ ಟ್ರಸ್ಟ್‌ನ ಕಚೇರಿ ತೆರದು ಅಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. 10 ವರ್ಷಗಳಿಂದ ನಿರಂತರ ಸೇವೆ ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದ ಅಶೋಕ್ ರೈಯವರು, ಟ್ರಸ್ಟ್‌ನ ಮುಖಾಂತರ 400 ಯುವಕರಿಗೆ ವಾಹನ ಚಾಲನಾ ತರಬೇತಿ ಹಾಗೂ ಲೈಸನ್ಸ್, 4೦೦೦ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಹಾಗೂ ಮೆಶಿನ್ ವಿತರಣೆ, 3400 ಮಂದಿ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ನೋಂದಾವಣೆ, ಪಾನ್‌ಕಾರ್ಡ್ ಮತ್ತು ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ಗಳನ್ನು ಉಚಿತವಾಗಿ ಮಾಡಿಕೊಡಲಾಗಿದೆ.

ನಾನಾ ಕಾರಣಗಳಿಂದ ಅಕ್ರಮ-ಸಕ್ರಮ, 94ಸಿಯ ಹಕ್ಕುಪತ್ರ ಪಡೆಯಲು ಅಸಾಧ್ಯವಾಗಿದ್ದವರಿಗೆ ಅವುಗಳನ್ನು ಒದಗಿಸಿಕೊಡುವ ಮೂಲಕ ಸಮಾಜದಲ್ಲಿ ಕಷ್ಟದಲ್ಲಿದ್ದವರ ಕಣ್ಣೀರು ಒರೆಸುವ ಕೆಲಸವನ್ನು ಟ್ರಸ್ಟ್‌ನ ಮೂಲಕ ನಡೆಸಲಾಗಿದೆ ಎಂದು ಅಶೋಕ್ ರೈಯವರು ತಿಳಿಸಿದರಲ್ಲದೆ ನಮ್ಮ ಸೇವಾ ಕಾರ್ಯದಲ್ಲಿ ಯಾವುದೇ ರಾಜಕೀಯದ ಉದ್ದೇಶ ಇಲ್ಲ ಎಂದು ಹೇಳಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಅಶೋಕ್ ರೈಯವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.

ತನ್ನ ಸಂಪಾದನೆಯ ಒಂದು ಭಾಗವನ್ನು ಬಡವರ ಅಭಿವೃದ್ಧಿಗಾಗಿ ಮೀಸಲಿಡುವ ಅಶೋಕ್ ರೈಯವರು ತನ್ನ ಹುಟ್ಟು ಹಬ್ಬವನ್ನು ಏಡ್ಸ್ ಪೀಡಿತರೊಂದಿಗೆ ಆಚರಿಸುವಂತಹ ಸರಳ ಮನೋಭಾವದವರಾಗಿದ್ದಾರೆ ಎಂದ ಅವರು, ಬಡವರನ್ನು ಒಟ್ಟು ಸೇರಿಸುವ ಅಶೋಕ್ ರೈಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಕಾರ್ಯಕ್ರಮ ಇತಿಹಾಸದ ಪುಟದಲ್ಲಿ ಮೂಡಬೇಕು: ಈಶ್ವರ ಭಟ್
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ನಾನು ಸಹಕಾರಿ ಸಂಘದ ಅಧ್ಯಕ್ಷನಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಅಶೋಕ್ ರೈಯವರ ಅಭಿಮಾನಿಯಾಗಿ ಭಾಗವಹಿಸಿದ್ದೇನೆ. ಪಕ್ಷ, ಜಾತಿ, ಮತ, ಬೇಧವಿಲ್ಲದೆ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ಕಾರ್ಯಕ್ರಮವು ಪುತ್ತೂರಿನ ಇತಿಹಾಸದ ಪುಟದಲ್ಲಿ ಮೂಡಬೇಕು ಎಂದರು.

ಅಶೋಕ್ ರೈ ವ್ಯಕ್ತಿಯಲ್ಲ, ಶಕ್ತಿ; ಶ್ರೀಕೃಷ್ಣ ಬೋಳಿಲ್ಲಾಯ
ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕವಾಗಿ ಸ್ಪಂದಿಸುತ್ತಿರುವ ಅಶೋಕ್ ರೈಯವರು ವ್ಯಕ್ತಿಯಲ್ಲ. ಅವರು ಒಬ್ಬ ಶಕ್ತಿ ಎಂದರು.

ಪಾಣಾಜೆ ರಣಮಂಗಲ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಯಶಸ್ವಿಯಾಗಿ ನೆರವೇರುವಲ್ಲಿ ಅಶೋಕ್ ರೈಯವರು ಪಾತ್ರ ಪ್ರಮುಖವಾಗಿದೆ. ಅವರ ಮೇಲೆ ದೊಡ್ಡ ಋಣವಿದೆ. ಅದರನ್ನು ತೀರಿಸುತ್ತೇವೆ ಎಂದು ಅವರು ಹೇಳಿದರು.

ವಿಟ್ಲ ಮಾಮೇಶ್ವರ ಶ್ರೀಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ನಾಯ್ತೊಟ್ಟು ಮತ್ತು ಹಿರಿಯರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎಂ. ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿ, ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಯಪ್ರಕಾಶ್ ಬದಿನಾರು ವಂದಿಸಿದರು.

ಪತ್ರಕರ್ತ ಸಂತೋಷ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗಾಗಿ ಪುತ್ತೂರು ತಾಲೂಕಿನ ಪ್ರತೀ ಗ್ರಾಮಗಳಿಂದ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಯುವ ಉದ್ಯಮಿ ನಿಹಾಲ್ ಶೆಟ್ಟಿ ಕಲ್ಲಾರೆ ಮತ್ತಿತರರು ಸಹಕರಿಸಿದರು.

ಗೌರವಾರ್ಪಣೆ:
ದೇಶ ವಿದೇಶಗಳಲ್ಲಿ ಸಂಚಲನ ಮೂಡಿಸುತ್ತಿರುವ ಕಾಂತಾರ ಕನ್ನಡ ಚಲನಚಿತ್ರದಲ್ಲಿ ಗುತ್ತಿನ ಮನೆಯ ಯಜಮಾನನಾಗಿ ಪಾತ್ರ ವಹಿಸಿ ಗಮನ ಸೆಳೆದಿರುವ ಕಂಬಳ ಕ್ಷೇತ್ರದ ಸಾಧಕರೂ ಆಗಿರುವ ಎಡ್ತೂರು ರಾಜೀವ ರೈಯವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಔತಣ ಕೂಟ ನಡೆಯಿತು. ಅಶೋಕ್ ಕುಮಾರ್ ರೈಯವರ ಪತ್ನಿ ಸುಮಾ ಅಶೋಕ್ ರೈ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ 300ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

DAKSHINA KANNADA

ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ‘ಬಿಗ್‌ ಬಾಸ್’ ರೂಪೇಶ್ ಶೆಟ್ಟಿ

Published

on

ಮಂಗಳೂರು : ಬಿಗ್‌ಬಾಸ್ ಮುಖೇನ ರಾಜ್ಯದಲ್ಲಿ ಹೆಸರು ಪಡೆದಿರುವ ಕರಾವಳಿಯಲ್ಲಿ ಸ್ಟಾರ್ ರೂಪೇಶ್ ಶೆಟ್ಟಿ. ತುಳುನಾಡಿನ ಹುಲಿವೇಷ ಕುಣಿತವನ್ನು ಬಿಗ್‌ಬಾಸ್ ನಲ್ಲಿ ಪರಿಚಯಿಸಿದ್ದು ಅಲ್ಲದೆ ವೇಷದಾರಿಗಳ ಜೊತೆ ಹೆಜ್ಜೆ ಕೂಡಾ ಹಾಕಿದ್ದಾರೆ.  ಅಲ್ಲದೇ ರೂಪೇಶ್ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ವಿನ್ನರ್ ಕೂಡ ಹೌದು. ತುಳು ಸಿನಿಮಾದಲ್ಲಿ ಮಿಂಚಿದ್ದ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ಬಳಿಕ ಕನ್ನಡ ಚಿತ್ರರಂಗದಲ್ಲೂ ಅವಕಾಶ ಸಿಕ್ಕಿತ್ತು. ಇದೀಗ ತಮಿಳು ಚಿತ್ರರಂಗಕ್ಕೂ ರೂಪೇಶ್ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.

ಅಮೃತ ಸಾರಥಿ ಎಂಬುವವರು ನಿರ್ದೇಶನ ಮಾಡುತ್ತಿರುವ ತಮಿಳು ಚಿತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ. ಯೋಗಿ ಬಾಬು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಪ್ರಮೋದ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. ‘ಸನ್ನಿಧಾನಂ PO’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ರೂಪೇಶ್ ಶೆಟ್ಟಿ, “ನನ್ನ ಮೊದಲ ತಮಿಳು ಚಿತ್ರ ಸನ್ನಿಧಾನಮ್ PO ಇದರ ಶೂಟಿಂಗ್ ನಿಮ್ಮೆಲ್ಲರ ಆಶೀರ್ವಾದದಿಂದ ಭರದಿಂದ ಸಾಗುತ್ತಿದೆ. ಯೋಗಿ ಬಾಬು ಅವರ ಜತೆ ನಟಿಸುವುದೇ ನನ್ನ ಪಾಲಿನ ಅದೃಷ್ಟ. ನನ್ನ ಸಿನಿ ಪಯಣ ಈ ರೀತಿಯಾಗಿ ಸಾಗಲು ನೀವೇ ಮೊದಲ ಕಾರಣ. ನಿಮ್ಮ ಪ್ರೀತಿ ಪ್ರೋತ್ಸಾಹ ಎಂದೂ ಹೀಗೆ ಇರಲಿ. ದೇವರಿಗೆ ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.

2023ರ ನವೆಂಬರ್ ತಿಂಗಳಲ್ಲಿ ಸಿನಿಮಾ ಘೋಷಿಸಲಾಗಿದೆ. ಈ ಚಿತ್ರದ ಮೂರನೇ ಹಂತದ ಶೂಟಿಂಗ್ ಈಗ ನಡೆಯುತ್ತಿದೆ. ಈ ಸಿನಿಮಾ ರಿಲೀಸ್ ದಿನಾಂಕವನ್ನು ರೂಪೇಶ್ ಶೆಟ್ಟಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ರೂಪೇಶ್ ಶೆಟ್ಟಿ ಅವರು ತುಳು ಸಿನಿಮಾಗಳಿಂದ ಬಣ್ಣದ ಬದುಕು ಆರಂಭಿಸಿದರು. 2015ರಲ್ಲಿ ರಿಲೀಸ್ ಆದ ‘ಐಸ್​ ಕ್ರೀಮ್’ ಹೆಸರಿನ ತುಳು ಚಿತ್ರದ ಮೂಲಕ ಅವರು ಹೀರೋ ಆದರು. 2023ರಲ್ಲಿ ಅವರ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ರಿಲೀಸ್ ಆಯಿತು. ಅವರು ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ ವಿನ್ನರ್ ಆಗಿದ್ದಾರೆ.

Continue Reading

DAKSHINA KANNADA

ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಇದರ 31ನೇ ನೂತನ ಎಲ್ಯಾರ್ ಪದವು ಶಾಖೆ ಶುಭಾರಂಭ

Published

on

ಮಂಗಳೂರು : ಸಹಕಾರಿ ಕ್ಷೇತ್ರದ ಅಗ್ರಗಣ್ಯ ಸಹಕಾರಿ ಸಂಘ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮತ್ತು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಮಂಗಳೂರು ಪಡೀಲ್‍ನ ಆತ್ಮಶಕ್ತಿ ಸೌಧದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಇದರ 31ನೇ ನೂತನ ಎಲ್ಯಾರ್ ಪದವು ಶಾಖೆ ಹೋಲಿಕ್ರಾಸ್ ಚರ್ಚ್ ನ ಬಳಿಯಿರುವ ಶರೂನ್ ಸ್ಟ್ರಕ್ಟರ್ ನ ಮೊದಲನೇ ಮಹಡಿಯಲ್ಲಿ ಬುಧವಾರ ಶುಭಾರಂಭಗೊಂಡಿತು.

ಸಾಮಾಜಿಕ ಕಳಕಳಿ ಶ್ಲಾಘನೀಯ : ಯು.ಟಿ.ಖಾದರ್

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ,  ಶ್ರೀಮಂತ ವರ್ಗದವರಿಗೆ ನಗರಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡುತ್ತದೆ. ಆದರೆ, ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳ ಸ್ಥಾಪನೆಗೆ ಆದ್ಯತೆ ನೀಡಿದ್ದು, ಇದೀಗ ಎಲ್ಯಾರ್ ಪದವಿನಂತಹ ಹಿಂದುಳಿದ ಪ್ರದೇಶದಲ್ಲಿ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನೂತನ ಶಾಖೆಯನ್ನು ಆರಂಭಿಸುವ ಮೂಲಕ ಸಹಕಾರಿ ಕ್ಷೇತ್ರದ ನಿಜವಾದ ಧ್ಯೇಯ ಉದ್ಧೇಶವನ್ನು ಈ ಸಂಘ ಮಾಡಿ ತೋರಿಸಿದೆ. ಮೂರು ಗ್ರಾಮಗಳ ಸಮ್ಮಿಲನದ ಈ ಪ್ರದೇಶ ವಾಣಿಜ್ಯವಾಗಿ ಅಭಿವೃದ್ಧಿ ಹೊಂದಿಲ್ಲ. ಇಂತಹ ಪ್ರದೇಶದಲ್ಲಿ ಜನರಿಗೆ ಸಹಕಾರಿ ಸೇವೆಯನ್ನು ನೀಡುವ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದ್ದು, ಈ ಪ್ರದೇಶದ ಜನರ ಆರ್ಥಿಕ ಕಾರ್ಯಕ್ಕೆ ಬೆಂಬಲ ನೀಡುವ ಮೂಲಕ ಉತ್ತಮ ಗ್ರಾಹಕ ಸೇವೆಯೊಂದಿಗೆ ಪ್ರದೇಶದ ಅಭಿವೃದ್ಧಿಗೂ ಕೊಡುಗೆ ನೀಡಲಿ ಎಂದರು.’

ಲಾಭದಾಯಕವಾಗಿ ನಡೆಯುತ್ತಿರುವ ಸಂಸ್ಥೆ : ಚಿತ್ತರಂಜನ್ ಬೋಳಾರ್

ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ ಮಾತನಾಡಿ, ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಎರಡನೇ ಶಾಖೆ ಆರಂಭಗೊಂಡಿದ್ದು, ಉಳ್ಳಾಲದ ಮಾಡೂರಿನಲ್ಲಿ ಅಂದಿನಿಂದ ಇಂದಿನವರೆಗೆ ಯು.ಟಿ.ಖಾದರ್ ಅವರು ಸಂಘದ ಶಾಖೆಯನ್ನು ಉದ್ಘಾಟಿಸಿದ್ದು ಲಾಭದಾಯಕವಾಗಿ ನಡೆಯುತ್ತಿದೆ. ಸಂಘ ಯಶಸ್ವಿಯಾಗಿ ಇಷ್ಟು ಶಾಖೆಗಳು ಆರಂಭಗೊಳ್ಳಲು ಮತ್ತು ಹತ್ತನೇ ವರ್ಷದಲ್ಲಿ ಸ್ವಂತ ಪ್ರಧಾನ ಕಚೇರಿ ನಿರ್ಮಾಣಕ್ಕೆ ಮುಖ್ಯ ಕಾರಣ ಸಂಘದ ಗ್ರಾಹಕರು, ಸದಸ್ಯರು ಮತ್ತು ಸಂಘದ ಆಡಳಿತ ಮಂಡಳಿಯೊಂದಿಗೆ ಸಿಬಂದಿ ವರ್ಗ ಕಾರಣವಾಗಿದ್ದಾರೆ ಎಂದರು.

ಭದ್ರತಾಕೋಶ ಉದ್ಘಾಟನೆ : 

ಎಲ್ಯಾರ್ ಪದವು ಹೊಲಿ ಕ್ರಾಸ್ ಚರ್ಚ್‌ನ ಧರ್ಮಗುರು ಎಫ್.ಆರ್.ಜಾನ್ ಡಿ’ಸೋಜ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುತ್ತಾರು ಶ್ರೀ ಪಂಜದಾಯ ಬಂಟ ದೈವಗಳ ಆದಿ ಕೊರಗತನಿಯ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ದೆಬ್ಬೇಲಿ ಮಹಾಬಲ ಹೆಗ್ಡೆ ಮಾಗಣ್ತಡಿ ಭದ್ರತಾಕೋಶ ಉದ್ಘಾಟಿಸಿದರು.

ಕೊಣಾಜೆ ಬೆಳ್ಮ ಸಿಎಸ್‍ಐ ಬೆತಾನೀಯ ಚರ್ಚ್‌ನ ಧರ್ಮಗುರು ರೆ| ವಿನಯಲಾಲ್ ಬಂಗೇರ ನಿರಖು ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಕೊಣಾಜೆ ಗ್ರಾ. ಪಂ. ಅಧ್ಯಕ್ಷೆ ಗೀತಾ ದಾಮೋದರ ಗಣಕೀಕೃತ ಬ್ಯಾಂಕಿಂಗ್‍ಗೆ ಚಾಲನೆ ನೀಡಿದರು. ಅಂಬ್ಲಮೊಗರು ಗ್ರಾ. ಪಂ. ಎಸ್.ಮಹಮ್ಮದ್ ಇಕ್ಬಾಲ್ ಇ ಮುದ್ರಾಂಕ ಸೇವೆಗೆ ಚಾಲನೆ ನೀಡಿದರು.

ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ರವೀಂದ್ರ ಬಂಗೇರ ಆವರ್ತನ ಠೇವಣಿಗೆ ಚಾಲನೆ ನೀಡಿದರು. ಶ್ರೀ ಆದಿಮಾಯೆ ರಾಮ ದತ್ತಾಂಜನೇಯ ಭಜನಾ ಮಂದಿರದ ಅಧ್ಯಕ್ಷ ಚಂದ್ರಹಾಸ್ ನಾಯ್ಕ ಉಳಿತಾಯ ಖಾತೆಗೆ ಚಾಲನೆ ನೀಡಿದರು.

ಇದನ್ನೂ ಓದಿ : ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು

ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರು, ಎಲ್ಯಾರ್ ಪದವು ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಎಡ್‍ಲೈನ್ ಐಮನ್, ಕಟ್ಟಡದ ಮಾಲಕ ರೆನೋಲ್ಡ್ ಜಿ ಅಮ್ಮಣ್ಣ .ಪಜೀರ್ ಗೋಶಾಲೆಯ ಟ್ರಸ್ಟಿ ಶಿವಪ್ರಸಾದ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿರ್ದೇಶಕರಾದ ಪಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಚಂದ್ರಹಾಸ ಮರೋಳಿ, ಗೋಪಾಲ್ ಎಂ. ಸಲಹೆಗಾರರಾದ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯವಿಜಯ್ ಸ್ವಾಗತಿಸಿದರು. ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು. ಸಿಬ್ಬಂದಿ ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

”ಕೊರೊನಾ ಸಂದರ್ಭದಲ್ಲಿ 10 ಕೋಟಿ ಇದ್ದ ಚಿನ್ನಾಭರಣ ಸಾಲ ಒಮ್ಮೆಲೇ 90 ಕೋಟಿ ರೂ.ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಸಂಘ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದೆ. ನೂತನ ಶಾಖೆಯಿಂದ ಬೇರೆ ಬ್ಯಾಂಕ್‍ಗಳಿಗೆ ಡಿಪಾಸಿಟ್ ಮಾಡಲು ಆರ್ ಟಇ ಜಿ ಎಸ್ ಸೌಲಭ್ಯ, ಇ ಮುದ್ರಾಂಕ, ಆರೋಗ್ಯ ವಿಮೆ, ಸಾಲ ವಿಮಾ ಭದ್ರತೆ ಸೇರಿದಂತೆ ವಿವಿಧ ಬ್ಯಾಂಕಿಂಗ್ ಸವಲತ್ತುಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು.”

ಸಹಕಾರ ರತ್ನ ಚಿತ್ತರಂಜನ್ ಬೋಳಾರ, ಅಧ್ಯಕ್ಷರು, ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಮಂಗಳೂರು

Continue Reading

BELTHANGADY

ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು

Published

on

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು(59 ವ) ಅವರು ಹೃದಯಾಘಾತದಿಂದ ಮೇ.1ರಂದು ರಾತ್ರಿ ನಿಧನರಾಗಿದ್ದಾರೆ.

gangadhar

ಮುಂದೆ ಓದಿ..;ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ

ಕೋಟದಲ್ಲಿ ಮೇ.1ರಂದು ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಕುಕ್ಕಿತ್ತಾಯನ ವೇಷ ಹಾಕಿದ್ದರು. ಮೇಳದ ಬಳಿಕ ಚೌಕಿಯಲ್ಲಿ ಬಣ್ಣ ತೆಗೆಯುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

gangadhar

ನಾರಾಯಣ ಮಯ್ಯು ಹಾಗೂ ಲಕ್ಷ್ಮೀ ದಂಪತಿ ಪುತ್ರನಾಗಿದ್ದು 1964ರಲ್ಲಿ ಪುತ್ತೂರಿನ ಸೇಡಿಯಾಪಿನಲ್ಲಿ ಜನಿಸಿದರು. ತನ್ನ 18 ನೇ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ಬಣ್ಣ ಹಚ್ಚಲು ಆರಂಭಿಸಿದ ಇವರು ಸ್ತ್ರೀ ವೇಷ, ರಾಜ ವೇಷ, ಪುಂಡು ವೇಷಗಳಲ್ಲಿ ನಿಸ್ಸೀಮರಾಗಿದ್ದರು. ಇನ್ನು ಮಾಲಿನಿ, ಚಿತ್ರಾಂಗದೆ, ಮೋಹಿನಿ, ದಾಕ್ಷಾಯಿನಿ, ಪ್ರಮೀಳೆ, ಶ್ರೀ ದೇವಿ, ಸೀತೆ, ದೇವೆಂದ್ರ, ದುಶ್ಯಾಸನ ಮೊದಲಾದ ಪಾತ್ರಗಳ ಅಭಿನಯದಲ್ಲಿಯೂ ಸೈ ಎನಿಸಿಕೊಂಡಿದ್ದರು. ಮೃತರು  ಆರೋಗ್ಯ ಸಹಾಯಕಿಯಾಗಿರುವ ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Continue Reading

LATEST NEWS

Trending