DAKSHINA KANNADA
ಪ್ರವೀಣ್ ನೆಟ್ಟಾರು ಪ್ರಕರಣ: ಆರೋಪಿ ವಿಚಾರಣೆಯ CCTV ತುಣುಕು ಪರಿಶೀಲನೆಗೆ ‘ಹೈ’ ನಿರ್ದೇಶನ
ಬೆಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳಿಗೆ ಕಿರುಕುಳ ನೀಡಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ ಎಂಬ ಆರೋಪದಡಿ ಸಂಬಂಧ ಎಫ್‍ಎಸ್‍ಎಲ್ ಮತ್ತು ಎನ್‍ಐಎ ಕಚೇರಿಯಲ್ಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲು ತನ್ನ ಕೇಂದ್ರ ಯೋಜನಾ ಸಂಚಾಲಕರು ಮತ್ತು ತಾಂತ್ರಿಕ ತಂಡಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಜಾಬಿರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಭಾಗೀಯ ಪೀಠ, ಎಫ್‍ಎಸ್‍ಎಲ್ ಮತ್ತು ಎನ್‍ಎಐ ಕಚೇರಿಗಳಲ್ಲಿ 2022ರ ನವೆಂಬರ್ ತಿಂಗಳ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದರೆ ಅದನ್ನು ವಿಶೇಷ ಕೋರ್ಟ್‍ಗೆ ಸಲ್ಲಿಸಬೇಕು ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಎನ್‍ಐಎ ಕಂಪ್ಯೂಟರ್ ಕೋಶ ಮತ್ತು ಸಿಬ್ಬಂದಿಗೆ ಆದೇಶಿಸಿದೆ.
ಎನ್‌ಐಎ ಅಧಿಕಾರಿಗಳ ಕರೆ ದಾಖಲೆ, ಎನ್‌ಐಎ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ಸಂಸ್ಥೆಯ ಅಧಿಕಾರಿಗಳ ಸಿಸಿಟಿವಿ ತುಣುಕುಗಳನ್ನು ಸಲ್ಲಿಸಲು ಆದೇಶಿಸುವಂತೆ ಕೋರಿ ಪ್ರಕರಣದ ಪ್ರಧಾನ ಆರೋಪಿ ಮೊಹಮ್ಮದ್ ಶಿಯಾಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಈ ನಿರ್ದೇಶನ ನೀಡಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಹಲವು ಮಂದಿಯನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದರು. ಅವರಲ್ಲಿ 18ನೆ ಆರೋಪಿ ಮೊಹಮ್ಮದ್ ಜಬೀರ್‍ಗೆ ಎನ್‍ಐಎ ಅಧಿಕಾರಿಗಳು ತಪ್ಪು ಒಪ್ಪಿಕೊಳ್ಳುವಂತೆ ಬಲವಂತ ಮಾಡಿ ಕಿರುಕುಳ ನೀಡಿದ್ದರು.
ಹೀಗಾಗಿ, ಅಂದಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮತ್ತು ಎನ್‍ಎಐ ಅಧಿಕಾರಿಗಳ ಕರೆ ದಾಖಲೆಗಳ ವಿವರಗಳನ್ನು ಒದಗಿಸುವಂತೆ ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಲಾಗಿತ್ತು. ಆದರೆ, ವಿಶೇಷ ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತ್ತು.
DAKSHINA KANNADA
ಕಡಲ ಮಧ್ಯೆ ಸಿಲುಕಿದ ಮೀನುಗಾರಿಕಾ ಬೋಟ್- ಮೀನುಗಾರರನ್ನು ರಕ್ಷಿಸಿದ ಕೋಸ್ಟ್‌ಗಾರ್ಡ್
ಮಂಗಳೂರು: ಮಂಗಳೂರು ನಗರದ ಹಳೆ ಬಂದರು ಧಕ್ಕೆಯಿಂದ ಮೀನುಗಾರಿಕೆಗೆ ಹೋಗಿದ್ದ ಬೋಟೊಂದು 39 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ತಾಂತ್ರಿಕ ಸಮಸ್ಯೆಗೆ ಸಿಲುಕಿದಾಗ ಅದರಲ್ಲಿದ್ದ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ನೌಕೆ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ತಿರುಚೆಂದೂರ್ ಮುರುಗನ್ ಹೆಸರಿನ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಅಡಚಣೆಗೆ ಸಿಲುಕಿತ್ತು.
ಈ ಬಗ್ಗೆ ಬೋಟ್‌ನಿಂದ ಮುಂಬೈನ ತಟ ರಕ್ಷಣಾ ಕೇಂದ್ರಕ್ಕೆ ತುರ್ತು ಸಂದೇಶ ರವಾನಿಸಲಾಗಿತ್ತು.
ಈ ಸಂದೇಶ ಸ್ವೀಕರಿಸಿದ ಮುಂಬೈನ ಎಂಆರ್‌ಸಿಸಿ ಕೇಂದ್ರದ ಅಧಿಕಾರಿಗಳು ತಕ್ಷಣ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದರು.
ಅದರಂತೆ ಕೋಸ್ಟ್‌ಗಾರ್ಡ್, ಮೀನುಗಾರಿಕಾ ಇಲಾಖೆ ಹಾಗೂ ಬೋಟ್ ಮಾಲಕರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿದ ಕೋಸ್ಟ್ ಗಾರ್ಡ್‌ನ ಎರಡು ಇಂಟರ್‌ಸೆಪ್ಟರ್ ಬೋಟ್‌ಗಳು ತಾಂತ್ರಿಕ ತೊಂದರೆಗೆ ಸಿಲುಕಿದ ಬೋಟ್‌ನ್ನು ನವಮಂಗಳೂರು ಬಂದರು ತೀರಕ್ಕೆ ಎಳೆದು ತಂದು ರಕ್ಷಿಸಿವೆ ಎಂದು ಕೋಸ್ಟ್‌ಗಾರ್ಡ್ ತಿಳಿಸಿದೆ.
BELTHANGADY
ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು- ಕಳ್ಳ ಅರೆಸ್ಟ್..!
ಬೆಳ್ತಂಗಡಿ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ನಿವಾಸಿ ಉಮೇಶ್ ಬಳೇಗಾರ್(47) ಬಂಧಿತ ಆರೋಪಿ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅಜಿತ್ ನಗರ ಕೆಲ್ಲೆ ನಿವಾಸಿ ಫೆಲಿಕ್ಸ್ ರೋಡ್ರಿಗಸ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಗಲು ಹೊತ್ತಿನಲ್ಲಿ ಮನೆಯ ಬಾಗಿಲು ಮುರಿದು ನುಗ್ಗಿ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಆಗಿದೆ.
ಈ ಕೂಡಲೇ ಮನೆಯವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ಆರೋಪಿ ವಿರುದ್ಧ ತಮಿಳುನಾಡು, ಕೇರಳದ ವಿವಿಧ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಿಸಲಾಗಿದೆ.
ಅಲ್ಲದೆ ಕರ್ನಾಟಕದ ಪುತ್ತೂರು, ಬಂಟ್ವಾಳ, ಮಂಗಳೂರು, ಮೂಡಬಿದ್ರೆ ಠಾಣೆಯಲ್ಲಿಯೂ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ.
ಈತನಿಗಾಗಿ ಮೂರೂ ರಾಜ್ಯಗಳ ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈತನಿಂದ ಕಳ್ಳತನ ಮಾಡಲಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
DAKSHINA KANNADA
ಜಾನುವಾರು ಸಾಗಾಟಗಾರರ ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರ ಬಂಧನ..!
ಮಂಗಳೂರು: ಜಾನುವಾರು ಅಕ್ರಮ ಸಾಗಾಟದ ತಂಡವೊಂದರ ಸದಸ್ಯರ ಕೊಲೆಗೆ ಸಂಚು ರೂಪಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್ ನಲ್ಲಿ ನಡೆದಿದೆ.
ಫರಂಗಿಪೇಟೆ ಸಮೀಪದ ಅಮೆಮಾರ್‌ನ ನಿವಾಸಿಗಳು ತಸ್ಲೀಮ್ ಯಾನೆ ಗರುಡ ತಸ್ಲೀಮ್ (34) ಮತ್ತು ಹೈದರಾಲಿ ಯಾನೆ ಹೈದು (26) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಗುರುವಾರದಂದು ತಸ್ಲೀಮ್ ಮತ್ತು ಆತನ ಗುಂಪಿನ ಸದಸ್ಯರು ಇನ್ನೊಂದು ತಂಡದ ಕೊಲೆಗೆ ಸಂಚು ರೂಪಿಸಿ ತಲವಾರಿನೊಂದಿಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಕೊಲೆ ಸಂಚನ್ನು ವಿಫಲಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ತಸ್ಲೀಮ್ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಹಾಗೂ ದರೋಡೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ, ಜಾನುವಾರು ಕಳ್ಳತನ ಪ್ರಕರಣ, ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣ ಗಳು, ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸಹಿತ 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಈತನು 10 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ.
ಇನ್ನೋರ್ವ ಆರೋಪಿ ಹೈದರಾಲಿಯು ಈ ಹಿಂದೆ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ, ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣ ಹಾಗೂ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.