ಇಸ್ಲಾಮಾಬಾದ್: ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯದ ಮೂಲಕ ಪ್ರಧಾನಿಯೊಬ್ಬರು ಅಧಿಕಾರ ಕಳೆದುಕೊಂಡಿದ್ದಾರೆ.
ಪಾಕ್ ಸಂಸತ್ ಆದ ನ್ಯಾಷನಲ್ ಅಸೆಂಬ್ಲಿಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ‘ವಿಶ್ವಾಸ’ ಗಳಿಸುವಲ್ಲಿ ವಿಫಲರಾಗಿದ್ದು, ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡರು.
ಶನಿವಾರ ನಡೆದ ಅವಿಶ್ವಾಸ ನಿರ್ಣಯ ಮತದಾನದಲ್ಲಿ ಪ್ರತಿಪಕ್ಷಗಳು ನ್ಯಾಷನಲ್ ಅಸೆಂಬ್ಲಿಯ 174 ಮತಗಳನ್ನು ಪಡೆದುಕೊಂಡವು.
ನ್ಯಾಷನಲ್ ಅಸೆಂಬ್ಲಿಯಲ್ಲಿ ಒಟ್ಟು 342 ಸದಸ್ಯರಿದ್ದು ಇಮ್ರಾನ್ ಖಾನ್ ಅಧಿಕಾರದಲ್ಲಿ ಮುಂದುವರೆಯಬೇಕಾದರೆ 172 ಸದಸ್ಯರ ಮತಗಳನ್ನು ಪಡೆಯುವುದು ಅನಿವಾರ್ಯವಾಗಿತ್ತು.
ಆದರೆ ಅವಿಶ್ವಾಸ ನಿರ್ಣಯದ ವೇಳೆ ಇಮ್ರಾನ್ಖಾನ್ನ ಪಿಟಿಐ ಪಕ್ಷದ ಸದಸ್ಯರು ಹಾಗೂ ಪಿಟಿಐ ಪಕ್ಷದ ಮೈತ್ರಿಕೂಟ ಪಕ್ಷದ ಬಹುತೇಕ ಸದಸ್ಯರು ಗೈರುಹಾಜರಾಗಿದ್ದರು.
ಇದೇ ವೇಳೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ, ಶೆಹಬಾಜ್ ಷರೀಫ್ ಅವರಿಗೆ ಪಾಕಿಸ್ತಾನ ಪ್ರಧಾನಿ ಹುದ್ದೆ ಸಿಗುವುದು ಬಹುತೇಕ ಖಚಿತವಾಗಿದೆ. ಷರೀಫ್ ಅವರು ಪಾಕಿಸ್ತಾನ್ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್-ಎನ್) ಪಕ್ಷದ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದು, ಇಮ್ರಾನ್ ಖಾನ್ ನಂತರ ಪಾಕಿಸ್ತಾನದ ಸಾರಥ್ಯವನ್ನು ಅವರು ವಹಿಸಿಕೊಳ್ಳಲಿದ್ದಾರೆ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಸುಳಿವು ನೀಡಿದ್ದರು.