ಮೈಸೂರು: ನೆಹರು ಅವರ ತಂದೆ ತಮ್ಮ ಇಡೀ ಆಸ್ತಿಯನ್ನು ದೇಶಕ್ಕೆ ಬರೆದು ಕೊಟ್ಟರು. ಸಿ.ಟಿ. ರವಿ ಏನು ಕೊಟ್ಟಿದ್ದಾರೆ. ಐದು ಪೈಸೆಯನ್ನು ದೇಶಕ್ಕೆ ಕೊಟ್ಟಿದ್ದೀರಾ? ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ವಿಶ್ವನಾಥ್ ಪ್ರಶ್ನಿಸಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾಜಿ ಪ್ರಧಾನಿ ನೆಹರು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ಜವಾಹರ ಲಾಲ್ ನೆಹರು ಅಧಿಕಾರದ ಅವಧಿಗಿಂತಾ ಹೆಚ್ಚಿನ ಅವಧಿ ಜೈಲಲ್ಲಿ ಕಳೆದರು. ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು. ಅವರ ಬಗ್ಗೆ ಸಿ.ಟಿ. ರವಿ ಅವರ ಅವಹೇಳನಕಾರಿ ಮಾತು ಯಾರೂ ಮೆಚ್ಚುವಂಥದಲ್ಲ ಎಂದು ಗುಡುಗಿದ್ದಾರೆ.
ಸಿ.ಟಿ. ರವಿಗೂ ಮತ್ತು ಬಿಜೆಪಿ ಗೂ ಈ ಮಾತು ಶೋಭೆ ತರುವುದಿಲ್ಲ. ಸಿ.ಟಿ. ರವಿ ಅವರು ನೆಹರು ಬಗ್ಗೆ ಓದಿಕೊಳ್ಳಬೇಕು. ವಾಜಪೇಯಿ ಅವರು ನೆಹರು ನಿಧನರಾದಾಗ ಏನು ಭಾಷಣ ಮಾಡಿದ್ದರು ಎಂಬುದನ್ನು ಸಿ.ಟಿ. ರವಿ ಓದಿಕೊಳ್ಳಬೇಕು. ನೆಹರು ಅವರ ಬಗ್ಗೆ ವಾಜಪೇಯಿ ಅವರು ಚರಿತ್ರಾರ್ಹ ಭಾಷಣ ಮಾಡಿದ್ದಾರೆ. ನೆಹರು ಅವರ ಬಗ್ಗೆ ಇಷ್ಟು ಲಘುವಾಗಿ ಮಾತಾಡಬಾರದು. ನಿಮಗೆ ನೆಹರು ಬಗ್ಗೆ ಏನು ಗೊತ್ತಿದೆ? ಏನು ತಿಳಿದು ಕೊಂಡಿದ್ದೀರಿ? ಎಂದು ರವಿ ಅವರನ್ನು ವಿಶ್ವನಾಥ್ ಪ್ರಶ್ನಿಸಿದ್ದಾರೆ.