ಮಂಗಳೂರು: ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಎನ್‌ಐಎ ಗೆ ವಹಿಸಿದ್ದರಿಂದ ಪ್ರಕರಣದ ಡಾಕ್ಯುಮೆಂಟೇಶನ್‌ಗಾಗಿ ಇಂದು ಎನ್‌ಐಎ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ನ್ಯಾಯಾಲಯಕ್ಕೆ ಹಾಜರಾದರು.
ಕುಕ್ಕರ್ ಬಾಂಬ್ ಸ್ಪೋಟದ ಬಗ್ಗೆ ಮಂಗಳೂರಿನ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅದನ್ನು ಎನ್‌ಐಎ ಗೆ ಹಸ್ತಾಂತರಿಸ ಬೇಕಾದರೆ ನ್ಯಾಯಾಲಯದ ಅನುಮತಿ ಪಡೆಯುವುದು ಅಗತ್ಯ.
ಈ ಹಿನ್ನೆಲೆಯಲ್ಲಿ ಪ್ರಕರಣದ ಡಾಕ್ಯುಮೆಂಟೇಶನ್‌ಗಾಗಿ ರಾಷ್ಟ್ರೀಯ ತನಿಖಾ ದಳದ ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿ ನೇತೃತ್ವದ ಎನ್‌ಐಏ ತಂಡ ಇಂದು ಮಂಗಳೂರಿನ ಜೆಎಂಎಫ್‌ಸಿ 7 ನೇ ನ್ಯಾಯಾಲಯಕ್ಕೆ ಆಗಮಿಸಿ ಈ ಪ್ರಕ್ರಿಯೆಯನ್ನು ನಡೆಸಿತು.
ಎರಡು ದಿನಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಂಡು ಪ್ರಕರಣವು ಎನ್‌ಐಎ ಗೆ ಹಸ್ತಾಂತರವಾಗುವ ನಿರೀಕ್ಷೆ ಇದೆ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ಶಾರೀಕ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧಾನವಾಗಿ ಚೇತರಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಸಂಪೂರ್ಣವಾಗಿ ಚೇತರಿಕೆ ಕಂಡ ಬಳಿಕ ಆತನನ್ನು ವಶಕ್ಕೆ ಪಡೆದು ಬಂಧಿಸಿ ಆತನ ಹೇಳಿಕೆಗಳನ್ನು ಪಡೆಯ ಬೇಕಾಗಿದೆ. ಈಗ ಆಸ್ಪತ್ರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.