ಮಂಗಳೂರು: ಸುರತ್ಕಲ್ ಅಕ್ರಮ ಟೋಲ್‌ಗೇಟ್‌ನಲ್ಲಿ ಸುಂಕ ಸಂಗ್ರಹವನ್ನು ಡಿಸೆಂಬರ್ ಒಂದರಿಂದ ಸ್ಥಗಿತಗೊಳಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಅಕ್ಟೋಬರ್ 28 ರಿಂದ ನಡೆಯುತ್ತಿರುವ ಹಗಲು ರಾತ್ರಿ ಧರಣಿಯನ್ನು ಡಿಸೆಂಬರ್ ಒಂದರಂದು ಸಾಯಂಕಾಲ ಮುಕ್ತಾಯಗೊಳಿಸಲಾಗುವುದು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.
ತಾತ್ಕಾಲಿಕ ನೆಲೆಯಲ್ಲಿ 2015 ಡಿಸೆಂಬರ್ ನಲ್ಲಿ ಸುಂಕ ಸಂಗ್ರಹ ಆರಂಭಿಸಿದ ಸುರತ್ಕಲ್ ಟೋಲ್ ಗೇಟ್ ತೆರವಿಗಾಗಿ ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್’ ಕಳೆದ ಆರು ವರ್ಷಗಳಿಂದ ಸತತ ಹೋರಾಟ ಸಂಘಟಿಸುತ್ತಾ ಬಂದಿದೆ. 2022 ವರ್ಷ ಪೂರ್ತಿ ಹೋರಾಟ ತೀವ್ರ ಸ್ವರೂಪದಲ್ಲಿ ನಡೆದಿದೆ.
ಅಕ್ಟೋಬರ್ 28 ರಿಂದ ಟೋಲ್ ಗೇಟ್ ತೆರವುಗೊಳ್ಳದೆ ತೆರಳುವುದಿಲ್ಲ ಎಂಬ ಘೋಷಣೆಯೊಂದಿಗೆ ಸುರತ್ಕಲ್ ಟೋಲ್ ಗೇಟ್ ಸಮೀಪ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ನೂರಾರು ಸಂಘ ಸಂಸ್ಥೆಗಳ, ಜನಸಮೂಹದ ವ್ಯಾಪಕ ಬೆಂಬಲ ಪಡೆದ ಹಗಲು ರಾತ್ರಿ ಧರಣಿಯ ತೀವ್ರತೆಗೆ ಮಣಿದ ಸರಕಾರ ಡಿಸಂಬರ್ ಒಂದರಿಂದ ಸುರತ್ಕಲ್ ಟೋಲ್ ಗೇಟ್ ಮುಚ್ಚಲು ಆದೇಶಿಸಿದೆ.
ಇದು ಪಟ್ಟು ಬಿಡದ ಜನ ಹೋರಾಟಕ್ಕೆ ಸಂದ ಗೆಲುವು ಎಂದು ಅಭಿಪ್ರಾಯ ಪಟ್ಟಿರುವ ಹೋರಾಟ ಸಮಿತಿ ದೀರ್ಘಕಾಲ ಅವಿರತ ಹೋರಾಟ ನಡೆಸಲು ಶಕ್ತಿ ತುಂಬಿದ ಸರ್ವರಿಗೂ ಧನ್ಯವಾದ ಸಲ್ಲಿಸಿದೆ.
ಹೆಜಮಾಡಿ ಟೋಲ್ ಶುಲ್ಕ ಹೆಚ್ಚಳದ ವಿರುದ್ದದ ಹೋರಾಟಕ್ಕೆ ಮುನ್ನಡೆಯಲು ನಿರ್ಧಾರ: ನವಂಬರ್ 30 ಮಧ್ಯರಾತ್ರಿ 12 ಗಂಟೆಗೆ ಸುರತ್ಕಲ್ ಟೋಲ್ ಗೇಟ್ ಮುಚ್ಚುತ್ತಿರುವ ಹಿನ್ನಲೆಯಲ್ಲಿ ಡಿಸೆಂಬರ್ ಒಂದನೇ ತಾರೀಖು ಸಂಜೆ ನಾಲ್ಕು ಗಂಟೆಗೆ ಅನಿರ್ಧಿಷ್ಟಾವಧಿ ಧರಣಿ ಸಮಾರೋಪ ನಡೆಸಲು, ಆ ಮೂಲಕ ಹೋರಾಟದ ಗೆಲುವನ್ನು ಸಂಭ್ರಮಿಸಲು, ಬೆಂಬಲಿಸಿದ, ಭಾಗಿಗಳಾದ ಸರ್ವರಿಗೂ ಧನ್ಯವಾದ ನಡೆಸಿ ಧರಣಿ ಮುಕ್ತಾಯಗೊಳಿಸಲು ನಿರ್ಧರಿಸಿದೆ.
ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವ ಸಂದರ್ಭದಲ್ಲಿ ಹೆಜಮಾಡಿಯ ನವಯುಗ್ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸಿ ಸುರತ್ಕಲ್ ಅಕ್ರಮ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಅನ್ಯಾಯದ ತೀರ್ಮಾನವನ್ನು ಸರಕಾರ ಕೈಗೊಂಡಿದೆ.
ಇದು ಎರಡೂ ಜಿಲ್ಲೆಯ ಜನರಿಗೆ ಬಿಜೆಪಿ ಸರಕಾರ ಎಸಗಿದೆ ದ್ರೋಹವಲ್ಲದೆ ಮತ್ತೇನು ಅಲ್ಲ. ಇಂತಹ ಅತ್ಯಂತ ಕೆಟ್ಟ ಸ್ಥಿತಿಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಂಸದ, ಶಾಸಕರುಗಳೇ ನೇರ ಹೊಣೆ. ಟೋಲ್ ತೆರವು ಪ್ರಕ್ರಿಯೆ ಸಂದರ್ಭ ಅವರು ಮಧ್ಯಪ್ರವೇಶ ನಡೆಸದೆ ನಿರ್ಲಿಪ್ತರಾಗಿದ್ದದ್ದು ಹೆಜಮಾಡಿಯಲ್ಲಿ ಶುಲ್ಕ ಹೆಚ್ಚಳಕ್ಕೆ ಕಾರಣ.
ಹೋರಾಟ ಸಮಿತಿಯು ಹೆಜಮಾಡಿಯಲ್ಲಿ ಹೆಚ್ಚುವರಿ ಶುಲ್ಕ ಸಂಗ್ರಹದ ನಿರ್ಧಾರವನ್ನು ಕಟುವಾಗಿ ಖಂಡಿಸುತ್ತದೆ, ಹೆಜಮಾಡಿಯಲ್ಲಿ ಶುಲ್ಕ ಕಡಿತಕ್ಕಾಗಿ ನಡೆಯಲಿರುವ ಹೋರಾಟದಲ್ಲಿ ಸಹಭಾಗಿ ಆಗಲಿದೆ.
ಹೆಜಮಾಡಿ ಟೋಲ್ ಹೆಚ್ಚಳ ರದ್ದುಗೊಳಿಸಲು ಆಗ್ರಹಿಸಿ ನಡೆಯಲಿರುವ ಹೋರಾಟ ಡಿಸೆಂಬರ್ ಎರಡರಂದು ಹೆಜಮಾಡಿಯಲ್ಲಿ ಸಾಮೂಹಿಕ ಧರಣಿಯ ಮೂಲಕ ಚಾಲನೆಗೊಳ್ಳಲಿದ್ದು ಅಂದಿನ ಸಾಮೂಹಿಕ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರಕಟಣೆ ತಿಳಿಸಿದೆ.