DAKSHINA KANNADA
Mangaluru: ಒಂದುವರೆ ವರ್ಷದ ಮಗು ಬಕೆಟ್ ಒಳಗೆ ಬಿದ್ದು, ಸಾವು..!
ಒಂದು ವರ್ಷ 8 ತಿಂಗಳ ಮಗುವೊಂದು ನೀರು ತುಂಬಿದ್ದ ಬಕೆಟ್ ಗೆ ಬಿದ್ದು, ಮೃತಪಟ್ಟ ಘಟನೆ ಮಂಗಳೂರಿನ ಕಾವೂರಿನಲ್ಲಿ ನಡೆದಿದೆ.
ಮಂಗಳೂರು: ಒಂದು ವರ್ಷ 8 ತಿಂಗಳ ಮಗುವೊಂದು ನೀರು ತುಂಬಿದ್ದ ಬಕೆಟ್ ಗೆ ಬಿದ್ದು, ಮೃತಪಟ್ಟ ಘಟನೆ ಮಂಗಳೂರಿನ ಕಾವೂರಿನಲ್ಲಿ ನಡೆದಿದೆ.
ಕಾವೂರು ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಫಿರೋಝ್ ಅನ್ಸಾರಿ ಎಂಬವರ ಪುತ್ರಿ ಆಯಿಶ ಮೃತ ಮಗು.
ಜಾರ್ಖಂಡ್ ಮೂಲದವರಾದ ಫಿರೋಝ್ ಅನ್ಸಾರಿ ಕೂಲಿ ಕಾರ್ಮಿಕರಾಗಿದ್ದು, ಈ ದಂಪತಿಗಳು ಕಾವೂರು ಮಸೀದಿಯ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಬುಧವಾರ ಸಂಜೆ ಮಗು ಆಯಿಶ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರು ತುಂಬಿದ್ದ ಬಕೆಟ್ ಗೆ ಬಿದ್ದು, ಮೃತಪಟ್ಟಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
DAKSHINA KANNADA
ಲೈಂಗಿಕವಾಗಿ ಬಳಸಿಕೊಂಡು ಬ್ಲಾಕ್ ಮೇಲ್ ಮಾಡಿದ ಭಟ್- ಪ್ರಕರಣ ದಾಖಲು..!
ಪುತ್ತೂರು: ಬಣ್ಣದ ಮಾತುಗಳಿಂದ ವಿಶ್ವಾಸಗಳಿಸಿ ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಪುತ್ತೂರಿನ ವ್ಯಕ್ತಿಯೊಬ್ಬ ಕೊನೆಗೆ ಮಹಿಳೆಯನ್ನೇ ಬ್ಲಾಕ್ ಮೇಲ್ ಮಾಡಿ ಹಣ ಕೀಳಲು ಯತ್ನಿಸಿದ ಬಗ್ಗೆ ಕಾರವಾರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರಿನ ಆರ್ಲಪದವು ಮೂಲದ ಪ್ರಶಾಂತ ಭಟ್ ಮಾಣಿಲ ಪ್ರಕರಣದ ಆರೋಪಿ.
ದೂರು ನೀಡಿದ ಮಹಿಳೆಯು ಸಂಗೀತದಲ್ಲಿ ಆಸಕ್ತಿ ಇದ್ದು, ಕ್ಲಬ್ ಹೌಸ್ ಆ್ಯಪ್ ನಲ್ಲಿ ಹಾಡುತ್ತಿದ್ದಳು.
2020 ರಲ್ಲಿ ಆ್ಯಪ್ ಮೂಲಕವೇ ಆರೋಪಿಯ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಕ್ರಮೇಣ ಪರಸ್ಪರ ಇಷ್ಟಪಟ್ಟಿದ್ದಾರೆ.
2023 ರ ಜನವರಿ ತಿಂಗಳಲ್ಲಿ ಆರೋಪಿಯು ಮಹಿಳೆಯನ್ನು ಭೇಟಿಯಾಗಲು ಬಂದು ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದಾನೆ.
ಅಲ್ಲಿ ಮಹಿಳೆಯ ಮೇಲೆ ಆರೋಪಿಯು ಲೈಂಗಿಕ ಹಲ್ಲೆ ನಡೆಸಿದ್ದಾನೆ.
ಅಲ್ಲದೇ ಅದೇ ಲಾಡ್ಜಿನಲ್ಲಿ ಘಟನೆಯು ಮತ್ತೊಮ್ಮೆ ನಡೆದಿದೆ ಎಂದು ಮಹಿಳೆಯು ದೂರಿನಲ್ಲಿ ದಾಖಲಿಸಿದ್ದಾರೆ.
ಈ ವೇಳೆ ಆರೋಪಿಯು ಮಹಿಳೆಯೊಂದಿಗಿರುವ ಖಾಸಗಿ ಕ್ಷಣಗಳ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ.
ಜತೆಗೆ ವಿಡಿಯೋ ಕಾಲ್ ಮಾಡಿ ಅಲ್ಲಿಯೂ ನಗ್ನ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ ಎಂದು ದೂರಲಾಗಿದೆ.
ಆರೋಪಿಯು ಮಹಿಳೆಯಿಂದ ಹಣಕ್ಕೂ ಬೇಡಿಕೆ ಇಟ್ಟಿದ್ದು, ಮಹಿಳೆಯು ಒಮ್ಮೆ 25 ಸಾವಿರ ಹಣ ನೀಡಿದ್ದಾಳೆ.
ಬಳಿಕ ಆರೋಪಿಯು ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಬೆದರಿಕೆ ನೀಡಿ ಏಳು ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾನೆ.
ಅಲ್ಲದೇ ಮಹಿಳೆಯ ತಾಯಿ ಹಾಗು ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾರವಾರದ ಮಹಿಳಾ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
DAKSHINA KANNADA
ಕಡಲ ಮಧ್ಯೆ ಸಿಲುಕಿದ ಮೀನುಗಾರಿಕಾ ಬೋಟ್- ಮೀನುಗಾರರನ್ನು ರಕ್ಷಿಸಿದ ಕೋಸ್ಟ್‌ಗಾರ್ಡ್
ಮಂಗಳೂರು: ಮಂಗಳೂರು ನಗರದ ಹಳೆ ಬಂದರು ಧಕ್ಕೆಯಿಂದ ಮೀನುಗಾರಿಕೆಗೆ ಹೋಗಿದ್ದ ಬೋಟೊಂದು 39 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ತಾಂತ್ರಿಕ ಸಮಸ್ಯೆಗೆ ಸಿಲುಕಿದಾಗ ಅದರಲ್ಲಿದ್ದ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ನೌಕೆ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ತಿರುಚೆಂದೂರ್ ಮುರುಗನ್ ಹೆಸರಿನ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಅಡಚಣೆಗೆ ಸಿಲುಕಿತ್ತು.
ಈ ಬಗ್ಗೆ ಬೋಟ್‌ನಿಂದ ಮುಂಬೈನ ತಟ ರಕ್ಷಣಾ ಕೇಂದ್ರಕ್ಕೆ ತುರ್ತು ಸಂದೇಶ ರವಾನಿಸಲಾಗಿತ್ತು.
ಈ ಸಂದೇಶ ಸ್ವೀಕರಿಸಿದ ಮುಂಬೈನ ಎಂಆರ್‌ಸಿಸಿ ಕೇಂದ್ರದ ಅಧಿಕಾರಿಗಳು ತಕ್ಷಣ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದರು.
ಅದರಂತೆ ಕೋಸ್ಟ್‌ಗಾರ್ಡ್, ಮೀನುಗಾರಿಕಾ ಇಲಾಖೆ ಹಾಗೂ ಬೋಟ್ ಮಾಲಕರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿದ ಕೋಸ್ಟ್ ಗಾರ್ಡ್‌ನ ಎರಡು ಇಂಟರ್‌ಸೆಪ್ಟರ್ ಬೋಟ್‌ಗಳು ತಾಂತ್ರಿಕ ತೊಂದರೆಗೆ ಸಿಲುಕಿದ ಬೋಟ್‌ನ್ನು ನವಮಂಗಳೂರು ಬಂದರು ತೀರಕ್ಕೆ ಎಳೆದು ತಂದು ರಕ್ಷಿಸಿವೆ ಎಂದು ಕೋಸ್ಟ್‌ಗಾರ್ಡ್ ತಿಳಿಸಿದೆ.
BELTHANGADY
ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು- ಕಳ್ಳ ಅರೆಸ್ಟ್..!
ಬೆಳ್ತಂಗಡಿ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ನಿವಾಸಿ ಉಮೇಶ್ ಬಳೇಗಾರ್(47) ಬಂಧಿತ ಆರೋಪಿ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅಜಿತ್ ನಗರ ಕೆಲ್ಲೆ ನಿವಾಸಿ ಫೆಲಿಕ್ಸ್ ರೋಡ್ರಿಗಸ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಗಲು ಹೊತ್ತಿನಲ್ಲಿ ಮನೆಯ ಬಾಗಿಲು ಮುರಿದು ನುಗ್ಗಿ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಆಗಿದೆ.
ಈ ಕೂಡಲೇ ಮನೆಯವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ಆರೋಪಿ ವಿರುದ್ಧ ತಮಿಳುನಾಡು, ಕೇರಳದ ವಿವಿಧ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಿಸಲಾಗಿದೆ.
ಅಲ್ಲದೆ ಕರ್ನಾಟಕದ ಪುತ್ತೂರು, ಬಂಟ್ವಾಳ, ಮಂಗಳೂರು, ಮೂಡಬಿದ್ರೆ ಠಾಣೆಯಲ್ಲಿಯೂ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ.
ಈತನಿಗಾಗಿ ಮೂರೂ ರಾಜ್ಯಗಳ ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈತನಿಂದ ಕಳ್ಳತನ ಮಾಡಲಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.