ಮಂಗಳೂರಿಗರನ್ನು ಬೇಸ್ತು ಬೀಳಿಸಿದ್ದ ಟ್ರಾಫಿಕ್ ಜಾಮ್ -ಶಾಸಕ ಕಾಮತ್ ತುರ್ತು ಸಭೆ
ಮಂಗಳೂರು: ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಉಂಟಾದ ಟ್ರಾಫಿಕ್ ಜಾಮ್ ಸಮಸ್ಯೆ ಕುರಿತು ಶಾಸಕ ವೇದವ್ಯಾಸ ಕಾಮತ್ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸೇರಿಂದಂತೆ ಎಲ್ಲ ಹಿರಿಯ ಅಧಿಕಾರಿಗಳು ಹಾಗೂ ಬಸ್ ಮಾಲಕರ ಸಂಘದ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು..
ಈ ವೇಳೆ ಶಾಸಕ ಕಾಮತ್ ಮಾತನಾಡಿ ಅಭಿವೃದ್ಧಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸಲು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. ಇಂದು ಪಿವಿಎಸ್ ಜಂಕ್ಷನ್ ನಿಂದ ನೇರವಾಗಿ ಕೆ.ಎಸ್ ರಾವ್ ರಸ್ತೆಗೆ ತೆರಳಲು ಅವಕಾಶ ಕಲ್ಪಿಸಿಕೊಡಬೇಕು. ಕೆಎಸ್ ರಾವ್ ರಸ್ತೆಯಿಂದ ಹಳೆ ಸರ್ವಿಸ್ ಬಸ್ ಸ್ಟ್ಯಾಂಡ್, ಮುಲ್ಕಿ ಸುಂದರ ರಾಮ್ ಶೆಟ್ಟಿ ರಸ್ತೆ ಸಂಪರ್ಕಕ್ಕೆ ಯೋಜನೆ ಸಿದ್ದಪಡಿಸಲಾಗಿದೆ ಎಂದರು.
ಅದೇ ರೀತಿ ಕೆ.ಎಸ್ ರಾವ್ ರಸ್ತೆಯ ಮೂಲಕ ಬರುವ ವಾಹನಗಳು ವಿ.ಟಿ ರಸ್ತೆಗೆ ತಿರುಗಲು ಹಾಗೂ ಶರವು ದೇವಳ ರಸ್ತೆ ಮೂಲಕ ಕ್ಲಾಕ್ ಟವರ್ ಬಳಿ ತೆರಳಲು ಅವಕಾಶ ಕಲ್ಪಿಸಲು ಸೂಚನೆ ನೀಡಿದರು.
ಶಾರದಾ ವಿದ್ಯಾಲಯ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ನಾಳೆಯಿಂದ ಜನರಿಗೆ ಸಮಸ್ಯೆಯಾಗದಂತೆ ಮತ್ತು ಟ್ರಾಫಿಕ್ ಸಮಸ್ಯೆ ಉದ್ಭವಿಸದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.
ಸಭೆಯಲ್ಲಿ ಸಹಾಯಕ ಆಯುಕ್ತ ಮದನ್ ಮೋಹನ್, ಸಂಚಾರಿ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ನಟರಾಜ್ ಸಂಚಾರ ಪಶ್ಚಿಮ ಪೊಲೀಸ್ ಠಾಣೆ ನಿರೀಕ್ಷಕರಾದ ಜಯಾನಂದ, ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು..