ಚೆನ್ನೈ: ಡ್ರಗ್ ಮಾಫಿಯಾ ಪತ್ರಕರ್ತನ ಬರ್ಬರ ಕೊಲೆ
ಚೆನ್ನೈ: ಸರ್ಕಾರಿ ಭೂಮಿಯ ಅಕ್ರಮ ಮಾರಾಟ ಮತ್ತು ಗಾಂಜಾ ಮಾರಾಟದ ಕುರಿತು ವರದಿ ಮಾಡುತ್ತಿದ್ದ ತಮಿಳುನಾಡಿನ ಟಿ.ವಿ. ಚಾನೆಲ್ ಒಂದರ ವರದಿಗಾರನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ತಮಿಳನ್ ಟಿವಿ ಸುದ್ದಿವಾಹಿನಿಯ 29 ವರ್ಷದ ಪುತ್ತು ನೆಲ್ಲೋರ್ ನಿವಾಸಿ ಮೋಸೆಸ್ ಎಂಬ ಯುವಕ ಕೊಲೆಯಾಗಿದ್ದಾರೆ.
ಈ ಘಟನೆ ತಮಿಳುನಾಡಿನ ಕುಂದ್ರತ್ತೂರ್‌ನಲ್ಲಿ ನಡೆದಿದೆ. ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವರದಿ ಮಾಡಿದ್ದರಿಂದ ತಮ್ಮ ಮಗನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ಮೋಸೆಸ್ ಅವರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಸ್ಥಳೀಯ ಭಾಗದ ಸಮಾಜವಿರೋಧಿ ಚಟುವಟಿಕೆಗಳ ಕುರಿತು ಸುದ್ದಿ ನೀಡುವ ಸಲುವಾಗಿ ಇಲ್ಲಿನ ಗಾಂಜಾ ಮಾರಾಟ ಗುಂಪಿನ ಬಗ್ಗೆ ವರದಿ ಮಾಡಿದ್ದ. ಅದರ ಬಳಿಕ ಆ ಗುಂಪಿನಿಂದ ಬೆದರಿಕೆಗಳು ಬಂದಿದ್ದವು ಎಂದು ಕುಟುಂಬದವರು ಹೇಳಿದ್ದಾರೆ.
ಆದರೆ ಪೊಲೀಸರು ಹೇಳುವುದೇ ಬೇರೆ. ಅಕ್ರಮ ಚಟುವಟಿಕೆಗಳ ವರದಿ ಮಾಡಿದ್ದ ಮೋಸೆಸ್, ಈ ವರದಿಯನ್ನು ಬಿತ್ತರ ಮಾಡದೇ ಇರಲು ಆರೋಪಿಗಳಿಗೆ ಹಣದ ಬೇಡಿಕೆ ಒಡ್ಡಿದ್ದರು. ಆದ್ದರಿಂದ ಹತ್ಯೆ ಮಾಡಲಾಗಿದೆ ಎಂದಿದ್ದಾರೆ. ಮೋಸೆಸ್ ಅವರನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಕುಡುಗೋಲಿನಿಂದ ದಾಳಿ ನಡೆಸಿದ್ದಾರೆ.
ತಲೆ ಮತ್ತು ಕೈಗೆ ತೀವ್ರವಾಗಿ ಗಾಯಗೊಂಡಿದ್ದ ಮೋಸೆಸ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ