ಮಂಗಳೂರು: ಸರಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಸರಗಳ್ಳರನ್ನು ಬಂಧಿಸಿದ್ದಾರೆ.
ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿ ಅದೇ ವಾಹನದಲ್ಲಿ ತೆರಳಿ ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದು ಇವರು ಪರಾರಿಯಾಗುತ್ತಿದ್ದರು. ಇಬ್ಬರು ಸರಕಳ್ಳರು ಮತ್ತು ಕದ್ದ ಚಿನ್ನ ಖರೀದಿ ಮಾಡಿದ ಇಬ್ಬರು ಸೇರಿ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೀಫ್(26), ಮೊಹಮ್ಮದ್ ಹನೀಫ್ (36), ಅಬ್ದುಲ್ ಸಮದ್ ಪಿ.ಪಿ ಹಾಗೂ ಮೊಹಮ್ಮದ್ ರಿಯಾಝ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ಮೊಹಮ್ಮದ್ ಹನೀಫ್ ಮಾ. 26 ರಂದು ಮಂಗಳೂರು ಗ್ರಾಮಾಂತರ ಪೊಲೀಸು ಠಾಣಾ ವ್ಯಾಪ್ತಿಯ ಕೆಲರೈ ಎಂಬಲ್ಲಿ ಪಾರ್ಕ್ ಮಾಡಿದ್ದ ಒಂದು ಆಕ್ಸಿಸ್ ದ್ವಿಚಕ್ರ ವಾಹವನ್ನು ಕಳವು ಮಾಡಿ ಅದೇ ದ್ವಿಚಕ್ರ ವಾಹನವನ್ನು ಉಪಯೋಗಿಸಿ, ಕಾವೂರು ಪೊಲೀಸು ಠಾಣಾ ವ್ಯಾಪ್ತಿಯ ಬೊಲ್ಪು ಗುಡ್ಡೆ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ವತ್ಸಲಾ ಎಂಬ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ದಾರಿ ಕೇಳುವ ನೆಪದಲ್ಲಿ ಸುಲಿಗೆ ಮಾಡಿದ್ದಾರೆ.
ನಂತರ ಚಿನ್ನಾಭರಣವನ್ನು ಕಾವೂರಿನ ನಕ್ಷತ್ರ ಜ್ಯುವೆಲ್ಲರಿಗೆ ಮಾರಾಟ ಮಾಡಿದ್ದರು.
ಆರೋಪಿ ಆರೀಫ್ ವಿರುದ್ಧ ಈ ಹಿಂದೆ ಸುಲಿಗೆ, ಕೊಲೆಯತ್ನ, ಮನೆ ಕಳ್ಳತನ ಸೇರಿ 18 ಪ್ರಕರಣ ಹಾಗೂ ಮೊಹಮ್ಮದ್ ಹನೀಫ್ ವಿರುದ್ಧ ಒಂದು ಸುಲಿಗೆ ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿಗಳಿಂದ 80 ಸಾವಿರ ಮೌಲ್ಯದ 18 ಗ್ರಾಂ ಚಿನ್ನದ 2 ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 2 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.