ತುಳು ಸಿನಿಮಾ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ನೀಡುವ ‘ಕೋಸ್ಟಲ್ ಫಿಲ್ಮ್ ಅವಾರ್ಡ್’ ಸಮಾರಂಭ ಜೂನ್ 4ರಂದು ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಸಭಾಂಗಣದಲ್ಲಿ ಮಧ್ಯಾಹ್ನ 2ರಿಂದ ಸಂಜೆ 7 ಗಂಟೆವರೆಗೆ ನಡೆಯಲಿದೆ.
ಮಂಗಳೂರು: ತುಳು ಸಿನಿಮಾ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ನೀಡುವ ‘ಕೋಸ್ಟಲ್ ಫಿಲ್ಮ್ ಅವಾರ್ಡ್’ ಸಮಾರಂಭ ಜೂನ್ 4ರಂದು ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಸಭಾಂಗಣದಲ್ಲಿ ಮಧ್ಯಾಹ್ನ 2ರಿಂದ ಸಂಜೆ 7 ಗಂಟೆವರೆಗೆ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾರ್ಯಕ್ರಮ ಆಯೋಜಕ ಸಂದೇಶ್ ರಾಜ್ ಬಂಗೇರ, ಒಟ್ಟು 28 ವರ್ಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
2020ರ ಜನವರಿಯಿಂದ 2022ರ ಡಿಸೆಂಬರ್‌ವರೆಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಚಿತ್ರಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ.
ಒಟಿಟಿಗಳಲ್ಲಿ ಮಾತ್ರ ಬಿಡುಗಡೆಯಾದ ಚಿತ್ರಗಳನ್ನು ಪರಿಗಣಿಸುವುದಿಲ್ಲ.
ಜೀವಮಾನ ಸಾಧನೆ ಪ್ರಶಸ್ತಿ, ತೀರ್ಪುಗಾರರ ವಿಶೇಷ ಪ್ರಶಸ್ತಿ ಹಾಗೂ ವರ್ಸಟೈಲ್ ಆ್ಯಕ್ಟರ್ ಪ್ರಶಸ್ತಿಯನ್ನೂ ಪ್ರದಾನ ಮಾಡಲಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ತಾರೆಯರು, ತುಳು ಸಿನಿಮಾ ರಂಗದ ಪ್ರಮುಖ ಕಲಾವಿದರು ಭಾಗವಹಿಸಲಿದ್ದಾರೆ.
ತಾರೆಯರೇ ನಡೆಸಿಕೊಡುವ 10 ನೃತ್ಯ ಕಾರ್ಯಕ್ರಮಗಳು ಹಾಗೂ ಪ್ರಕಾಶ್ ಮಹಾದೇವನ್ ತಂಡವು ನಡೆಸಿಕೊಡುವ ರಸಮಂಜರಿ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆ’ ಎಂದರು.
ಸಿನಿಮಾ ನಿರ್ದೇಶಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ ‘ತುಳು ಸಿನಿಮಾಗಳ ಫಿಲ್ಮ್ ಛೇಂಬರ್ ಗಟ್ಟಿಗೊಳಿಸುವ ಅಗತ್ಯವಿದೆ.
ಇದರಿಂದ ತುಳು ಚಿತ್ರಗಳ ನಡುವೆಯೇ ಅನಗತ್ಯ ಪೈಪೋಟಿ ಉಂಟಾಗುವುದನ್ನು ತಪ‍್ಪಿಸಬಹುದು’ ಎಂದರು.
ಸುದ್ದಿಗೋಷ್ಠಿಯಲ್ಲಿ ಯಶ್‌ರಾಜ್, ಪ್ರೇಮ್ ಶೆಟ್ಟಿ, ಕಾರ್ತಿಕ್ ರೈ ಹಾಗೂ ಉದಯ್ ಬಲ್ಲಾಳ್ ಇದ್ದರು.