ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,
ತ್ಯಾಜ್ಯದಿಂದ ಬೇಸತ್ತ ಸಾರ್ವಜನಿಕರು ಬೆಳ್ಳಂಬೆಳಗ್ಗೆ ಸ್ಥಳೀಯ ಕಾರ್ಪೋರೇಟರ್‌ಗಳಿಗೆ ಪೋನಾಯಿಸಿ ಬೈಯುತ್ತಿದ್ದಾರೆ.
ಇದರಿಂದ ಬೇಸತ್ತ ಮನಪಾ ಕಾರ್ಪೋರೇಟರ್ ಕಸದ ಗಾಡಿಯಲ್ಲೇ ಬಂದು ಮನೆ ಮನೆಗೆ ತೆರಳಿ ಕಸ ವಿಲೇವಾರಿ ಮಾಡಿದ ವೀಡಿಯೋ ವೈರಲ್ ಆಗಿದೆ.
ಮಂಗಳೂರಿನ ಮಠದ ಕಣಿಯ ಬೋಳೂರು ವಾರ್ಡ್‌ನಲ್ಲಿ ತ್ಯಾಜ್ಯ ವಿಲೇವಾರಿ ವಾಹನ ಬಾರದೇ ಕಸದ ರಾಶಿ ಬಿದ್ದಿದೆ. ಜೊತೆಗೆ ಮನೆ ಮನೆಗಳಲ್ಲಿ ತ್ಯಾಜ್ಯ ತುಂಬಿ ಹೋಗಿದ್ದು,
ರಸ್ತೆ ಬದಿ ಇಟ್ಟಿರುವ ಕಸವನ್ನು ಬೀದಿ ನಾಯಿಗಳು ಹರಿದು ಹಾಕಿವೆ. ಜೊತೆಗೆ ಮಳೆ ನೀರಿಗೆ ಕೆಲವು ತ್ಯಾಜ್ಯ ಹರಿದು ಹೋಗಿ ಪ್ಲಾಸ್ಟಿಕ್ ತ್ಯಾಜ್ಯಗಳಲ್ಲಿ ನೀರು ತುಂಬಿ ಸೊಳ್ಳೆ ಉತ್ಪತ್ತಿಯಾಗುತ್ತಿತ್ತು.
ಇದೆಲ್ಲದರಿಂದ ಬೇಸತ್ತ ವಾರ್ಡ್‌ನ ಜನ ರಾತ್ರಿ ಹಗಲೆಂಬಂತೆ ಬೆಂಬಿಡದೆ ಫೋನ್ ಮಾಡಿ ಕಾಪೋರೇಟರ್‌ಗೆ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದರು.
ಇದರಿಂದ ನೊಂದ ಬೋಳೂರು ವಾರ್ಡ್ ಕಾರ್ಪೋರೇಟರ್ ಜಗದೀಶ್ ಶೆಟ್ಟಿ ಸ್ವತಃ ಇಂದು ಬೆಳಗ್ಗೆ ಕಸದ ಗಾಡಿಯಲ್ಲೇ ಮನೆ ಮನೆಗೆ ತೆರಳಿ ಕಸದ ವಿಲೇವಾರಿ ಮಾಡಿಸಿದ್ದಾರೆ.
ಕಾರ್ಪೋರೇಟರ್ ಜಗದೀಶ್ ಶೆಟ್ಟಿಯವರ ಈ ಕಾರ್ಯವೈಖರಿ ಇದೀಗ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗುತ್ತಿದೆ.
ಒಬ್ಬ ಪಾಲಿಕೆ ಸದಸ್ಯ ಜನರ ದಿನನಿತ್ಯ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಗೆ ಭೇಷ್ ಅಂದಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಬಗ್ಗೆ ಪ್ರತಿನಿತ್ಯ ದೂರುಗಳು ಬರುತ್ತಿವೆ. ಜೊತೆಗೆ ಕಳೆದ 7 ವರ್ಷಗಳಿಂದ ಮುಂಬೈ ಮೂಲದ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ನ ಕಸ ನಿರ್ವಹಣೆ ಮಾಡುತ್ತಿದ್ದು,
ಇದೇ ವರ್ಷ ಜನವರಿಯಲ್ಲಿ ಗುತ್ತಿಗೆ ಅಂತ್ಯಗೊಂಡಿದ್ದು, ಮುಂದಿನ ಜನವರಿ ಅಂತ್ಯದ ವರೆಗೆ ಗುತ್ತಿಗೆ ವಿಸ್ತರಿಸಲಾಗಿದೆ.