ಮಂಗಳೂರು: ಮಳೆಗಾಲ ಬಂತೆಂದರೆ ಮಂಗಳೂರಿನಲ್ಲಿ ಹತ್ತು ಹಲವು ಸಮಸ್ಯೆಗಳು ಕಾಡುತ್ತವೆ. ಅದರಲ್ಲೂ ಬಹುಮಹಡಿ ಕಟ್ಟಡದ ಕೆಳಭಾಗದಲ್ಲಿ ನಡೆಯುತ್ತಿರುವ
ಕಾಮಗಾರಿಗಳಿಂದಾಗಿ ಕೆಳಭಾಗದಲ್ಲಿರುವ ನೀರು ಹರಿದು ಹೋಗುವ ಚರಂಡಿಗಳು ಮುಚ್ಚುವುದರಿಂದ ಮೇಲ್ಭಾಗದಿಂದ ಮಣ್ಣು ಕುಸಿದು ಕೆಳಕ್ಕೆ ಬೀಳುವು ಅನಾಹುತ ಹೆಚ್ಚಾಗುತ್ತದೆ.
ಇಂತಹದ್ದೇ ಸಮಸ್ಯೆ ಇದೀಗ ಕದ್ರಿ ಟೋಲ್‌ಗೇಟ್ ಬಳಿ ಇರುವ ಸ್ಟಾರ್ ಲೆಗಸಿ ಫ್ಲ್ಯಾಟ್ ಪರಿಸರದಲ್ಲಿ ಕಂಡು ಬಂದಿದೆ. ಲೆಗಸಿ ಬಹುಮಹಡಿ ವಸತಿ ಸಮುಚ್ಛಯದಲ್ಲಿ ಹಲವು ಕುಟುಂಬಗಳು ವಾಸಿಸುತ್ತಿವೆ.
ಕೆಳಭಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಮೀನು ಸಮತಟ್ಟು ಮಾಡುತ್ತಿದ್ದಾರೆ. ಅಲ್ಲದೆ ಇಲ್ಲಿ ಹಲವು ವರ್ಷಗಳಿಂದ ಇರುವ ನಿವಾಸಿಗಳೂ ಇದ್ದಾರೆ.
ಕೆಳಭಾಗದಲ್ಲಿ ಮಣ್ಣು ಸಮತಟ್ಟು ಮಾಡುತ್ತಿರುವುದರಿಂದ ಲೇಗಸಿ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕೆಳಭಾಗ ಕುಸಿದುಹೋಗಿದ್ದು,
ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರಿಗೆ ಕಟ್ಟಡವೇ ಕುಸಿಯುವ ಭೀತಿ ಎದುರಾಗಿದೆ. ಇನ್ನೊಂದೆಡೆ ಇಲ್ಲಿ ಹಲವು ವರ್ಷಗಳಿಂದ ಇರುವ ನಿವಾಸಿಗಳು ಕೂಡಾ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಈ ಕಟ್ಟಡಕ್ಕೆ 12 ವರ್ಷ ಆಗಿದೆ. ಆದರೆ ಕಟ್ಟಡದ ಮಾಲಕರು ನಮಗೆ ಕಂಪ್ಲೀಶನ್ ಸರ್ಟಿಫಿಕೇಟ್ ನೀಡಿಲ್ಲ. ನ್ಯಾಯಾಲಯದಲ್ಲೂ ವಿಚಾರಣೆ ನಡೆದಿದೆ.
ಮಾಲಕರು ಮುಂಬೈನಲ್ಲಿದ್ದಾರೆ. ನಾವು ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದೇವೆ. ಸದ್ಯಕ್ಕೆ ನಾವೇ ಸೇರಿ ಮೈಂಟೆನೆನ್ಸ್ ಮಾಡುತ್ತಿದ್ದೇವೆ.
ಅವರು ಕೂಡಲೇ ನಮಗೆ ಎಲ್ಲಾ ಕಂಪ್ಲೀಶನ್ ಮಾಡಿಕೊಟ್ಟರೆ ಕೊಟ್ಟರೆ ನಾವು ಸೊಸೈಟಿ ಮಾಡಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಬಹುದು ಎನ್ನುತ್ತಾರೆ ಲೆಗಸಿ ನಿವಾಸಿ ಪ್ರದೀಪ್ ಡಿ ಸೋಜಾ.
ಇನ್ನು ಇಲ್ಲಿನ ನಿವಾಸಿ ಕುಮಾರ್ ಎನ್ನುವವರು ಪ್ರತಿಕ್ರಿಯೆ ನೀಡಿ, ನಾವು ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಭಾರಿ ಯಂತ್ರಗಳಿಂದ ಕೆಲಸ ಮಾಡುತ್ತಿರುವುದರಿಂದ ನಮ್ಮ ಮನೆ ಗೋಡೆ ಬಿರುಕು ಬಿಟ್ಟಿದೆ.
ಕೆಳಭಾಗದಲ್ಲಿ ಕೆಲಸ ಮಾಡುವುದಕ್ಕೆ ನಮ್ಮ ಅಬ್ಜೇಕ್ಷನ್ ಇಲ್ಲ. ಆದರೆ ಎಲ್ಲಾ ಸುರಕ್ಷತೆಗಳನ್ನು ತೆಗೆದುಕೊಂಡು ಅವರು ಕೆಲಸ ಮಾಡಲಿ ಎಂದು ಒತ್ತಾಯಿಸಿದ್ದಾರೆ.