ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಶ್ರೀರಾಮ, ಸೀತಾದೇವಿ ಮತ್ತು ಆಂಜನೇಯನ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪದ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ಧರಣಿಗೆ ಮುಂದಾಗಿದ್ದ ಕಾಂಗ್ರೆಸ್ ಮುಖಂಡೆ ಶೈಲಜಾ ಅಮರನಾಥ್ ತಮ್ಮ ಧರಣಿಯನ್ನು ಮುಂದೂಡಿದ್ದಾರೆ.
ಸಾಮಾಜಿಕ ಜಾಲತಾಣವಾದ ಕ್ಲಬ್ ಹೌಸ್ ನಲ್ಲಿ ರಾಮನ ಬಗ್ಗೆ ಅವಹೇಳನಕಾರಿ ಮಾತನಾಡಿದ ಆರೋಪ ಎದುರಿಸುತ್ತಿರುವ
ಶೈಲಜಾ ವಿರುದ್ಧ ಹಿಂದೂಪರ ಸಂಘಟನೆಗಳು ಪ್ರಕರಣ ದಾಖಲಿಸಿದ್ದವು. ಈ ಘಟನೆಗೆ ಸಂಬಂದಿಸಿದಂತೆ ತನ್ನ ಆಡಿಯೋವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದ ಶೈಲಜಾ,
ಈ ಬಗ್ಗೆ ಸೂಕ್ತ ತನಿಖೆ ನಡೆಸದಿದ್ದರೆ ನನ್ನನ್ನು ಬಂಧಿಸಿ ಎಂದು ಇಂದು ಪುತ್ತೂರು ನಗರ ಪೋಲೀಸ್ ಠಾಣೆಯ ಮುಂದೆ ಧರಣಿಗೆ ನಿರ್ಧರಿಸಿದ್ದರು.
ಈ ನಡುವೆ ಪೊಲೀಸರ ಮನವಿ ಮೇರೆಗೆ ಧರಣಿಯನ್ನು ಮುಂದೂಡಿರುವ ಶೈಲಜಾ ಅಮರನಾಥ ಪೊಲೀಸರಿಗೆ ತನಿಖೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.