DAKSHINA KANNADA
ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ಮೌಲ್ಯದ ಆಸ್ತಿ ಕಬಳಿಕೆ ಪ್ರಕರಣ : ಇಬ್ಬರನ್ನು ಬಂಧಿಸಿದ ಸೆನ್ ಪೊಲೀಸರು..!
ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಮೌಲ್ಯದ ಆಸ್ತಿ ಕಬಳಿಕೆ ಮಾಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಅಶೋಕ್ ಕುಮಾರ್ ಮತ್ತು ರೇಷ್ಮಾ ವಾಸುದೇವ ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ. ಮಂಗಳೂರು ಬಜಪೆ ಕೊಂಪದವು ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಕ್ರಿಸ್ಟಿನ್ ಎಡ್ವಿನ್ ಜೋಸೆಫ್ ಗೋನ್ವಾಲ್ವಿಸ್ ಅವರಿಗೆ ಉಡುಪಿ ಜಿಲ್ಲೆಯ ಮೂಡು ತೋನ್ಸೆ ಗ್ರಾಮದಲ್ಲಿ 77 ಸೆಂಟ್ಸ್ ಜಾಗವಿದ್ದು, ಈ ಜಾಗ ಮಾರಾಟದಲ್ಲಿ ಅಶೋಕ್ ಕುಮಾರ್, ರೇಷ್ಮಾ ವಾಸುದೇವ ನಾಯಕ್ ಮತ್ತು ರಾಮ ಪೂಜಾರಿ ಎಂಬವರು ವಂಚಿಸಿದ್ದರು.
ಕ್ರಿಸ್ಟಿನ್ ಅವರು 77 ಸೆಂಟ್ಸ್ ಜಾಗವನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಆರೋಪಿಗಳು ಹಣದ ಅಭಾವವಿರುವ ಕಾರಣ ಪ್ರಾರಂಭಿಕ ಹಂತದಲ್ಲಿ 40 ಸೆಂಟ್ಸ್ ಮಾತ್ರ ಖರೀದಿಸುವುದಾಗಿ ನಂಬಿಸಿ ರಿಜಿಸ್ಟ್ರಿ ಮಾಡಿಕೊಂಡಿದ್ದರು.
ಈ ಸಂದರ್ಭ ಆರೋಪಿಗಳು ನೀಡಿದ ಕೆಲವು ಚೆಕ್ ಕೂಡ ಬೌನ್ಸ್ ಆಗಿದ್ದು, ಹಣವನ್ನು ಬೆಂಗಳೂರಿಗೆ ತಂದು ಕೊಡುವುದಾಗಿ ಹೇಳಿದ್ದರು.
ಆದರೆ ಈ ಮಧ್ಯೆ ಆರೋಪಿಗಳು ತನ್ನ ಜಾಗದಲ್ಲಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಕ್ರಿಸ್ಟಿನ್ ಪರಿಶೀಲನೆ ನಡೆಸಿದಾಗ ಮೂವರು ಆರೋಪಿಗಳು ಸೇರಿ ವಂಚಿಸಿ 77 ಜಾಗವನ್ನು ರಿಜಿಸ್ಟ್ರಿ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಮೋಸದಿಂದ ಸಹಿಯನ್ನು ನಕಲಿ ಮಾಡಿ ಜಾಗವನ್ನು ಲಪಟಾಯಿಸಿದ್ದಾರೆ ಎಂದು ಕ್ರಿಸ್ಟಿನಾ ಎಡ್ವಿನ್ ದೂರಿನಲ್ಲಿ ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಸೈಬರ್ ಠಾಣೆಗೆ ದೂರು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ.
DAKSHINA KANNADA
ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು
ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.
DAKSHINA KANNADA
ಮಂಗಳೂರು: 30.98% ಮತದಾರರಿಂದ ಮತ ಚಲಾವಣೆ
ಮಂಗಳೂರು: 17-ದ.ಕ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ 30.98 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
ಸುಳ್ಯದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, 16.46 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅತಿ ಕನಿಷ್ಠ ಮತ ಚಲಾವಣೆಯಾಗಿದ್ದು, 12.2 ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಕಾರ್ ಸ್ಟ್ರೀಟ್ ಸರ್ಕಾರಿ ಬಾಲಕಿಯರ ಎಪಿಯು ಕಾಲೇಜಿನಲ್ಲಿ ಮತದಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು.
DAKSHINA KANNADA
ಮಂಗಳೂರು: ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ; ಪೊಲೀಸ್ ಅಧಿಕಾರಿಗಳ ಜೊತೆಯಲ್ಲೇ ಅನುಚಿತ ವರ್ತನೆ
ಮಂಗಳೂರು: ನಗರದ ಕಪಿತಾನಿಯೋ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿ ಜೊತೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸ್ ಹಾಗೂ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದವುಂಟಾದ ಘಟನೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್. ಆರ್ ಪೂಜಾರಿಯವರು ಮತದಾನ ಮಾಡಿ ಹೊರಬಂದಾಗ ಮಾಧ್ಯಮದವರು ಗೇಟಿನ ಹೊರಭಾಗದಲ್ಲಿ ಅವರ ಹೇಳಿಕೆ ತೆಗೆದುಕೊಳ್ಳುತ್ತಿದ್ದರು. ಆಗ “ಎಷ್ಟು ಹೊತ್ತು ಪ್ರತಿಕ್ರಿಯೆ ಪಡೆಯುವುದು”ಎಂದು ಸಂದೀಪ್ ಎಕ್ಕೂರು ಎಂಬಾತ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಸೇರಿದಂತೆ ಇತರ ಪೊಲೀಸರು ಆತನನ್ನು ತಳ್ಳಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ಈ ವೇಳೆ ಆತನೊಂದಿಗೆ ಇದ್ದವರು ಸಮಾಧಾನ ಮಾಡಲು ಯತ್ನಿಸಿದರೂ, ಆತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ವಾಗ್ವಾದ ನಡೆಸಿದ್ದಾನೆ. ಆಗ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಪೊಲೀಸರು ಅಲ್ಲಿಂದ ಹಿಂದಿರುಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮ ವರದಿಗಾರರ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಪತ್ರಕರ್ತರೊಂದಿಗೂ ತಂಡದಿಂದ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ವೇಳೆ ಆತನ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುತ್ತೇನೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.