ಮೂಲ್ಕಿ: ಕಟೀಲು ಶ್ರೀ ದುರ್ಗಾರಪಮೇಶ್ವರೀ ದೇವಸ್ಥಾನದಿಂದ ಪ್ರವರ್ತಿತ ಆರು ದಶಾವತಾರ ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟದ ಕೊನೆಯ ಪತ್ತನಾಜೆ ಸೇವೆಯಾಟ ನಿನ್ನೆ ಜರುಗಿತು.
ಊರು ಪರವೂರುಗಳಲ್ಲಿ ತಿರುಗಾಟ ಮುಗಿಸಿದ ಎಲ್ಲಾ ಆರು ಮೇಳಗಳ ಬಸ್ ಹಾಗೂ ಲಾರಿಗಳು ಹೂವುಗಳಿಂದ ಅಲಂಕರಿಸಲ್ಪಟ್ಟು ಧ್ವನಿವರ್ಧಕದ ಮೂಲಕ ದೇವರ ಸ್ತುತಿ ಘೋಷಣೆಯೊಂದಿಗೆ ಕಟೀಲು ರಥಬೀದಿಗೆ ಬಂದು ಮೇಳದ ದೇವರನ್ನು ಮರಳಿ ಸ್ವಾಗತಿಸುವ ಮೂಲಕ ಪುರ ಪ್ರವೇಶದ ಸಂಭ್ರಮ ಬುಧವಾರ ಬೆಳಗ್ಗೆ ನಡೆಯಿತು. ಈ ವೇಳ ಹಿಂದಿನ ದಿನದ ಸೇವಾಕರ್ತರು ಪಾಲ್ಗೊಂಡಿದ್ದರು.
ಬುಧವಾರ ಮಧ್ಯಾಹ್ನ ಕ್ಷೇತ್ರದ ಮಹಾಲಕ್ಷ್ಮೀ ಸದನದಲ್ಲಿ ಎಲ್ಲಾ ಆರು ಮೇಳಗಳ ದೇವರ ಚೌಕಿ ಪೂಜೆ ನಡೆದು ರಾತ್ರಿ ಭವ್ಯವಾಗಿ ಅಲಂಕರಿಸಲಾದ ಆರು ಮಂಟಪಗಳ್ಲಲಿ ಚೌಕಿ ಪೂಜೆ ನಡೆಯಿತು. ಬಳಿಕ ಆರು ರಂಗಸ್ಥಳಗಳ್ಲಲಿ ದಶಾವತಾರ,
ಶ್ರೀನಿವಾಸ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು. ಇಂದು ಬೆಳಗ್ಗೆ ದೇವಳದಲ್ಲಿ ಶ್ರೀ ದೇವರ ಸಾನಿಧ್ಯದಲ್ಲಿ ಕಲಾವಿದರು ಗೆಜ್ಜೆ ಬಿಚ್ಚುವ ಮುಖಾಂತರ ಪತ್ತನಾಜೆಯ ಕೊನೆಯ ಆಟ ಸಂಪನ್ನಗೊಂಡಿತ್ತು.
ಮೇಳಗಳ ದೇವರು ಒಳ ಪ್ರವೇಶಿಸಿದರೆ ಮುಂದಿನ ತಿರುಗಾಟ ಆರಂಭಕ್ಕೆ ಮುನ್ನ ಹೊರ ಬರುವಂತಿಲ್ಲ ಎಂಬುದು ಪದ್ಧತಿ. ಈ ಕ್ಷಣದಿಂದ ಮೇಳದ ದೇವರುಗಳಿಗೆ ಪ್ರತ್ಯೇಕ ಆರಾಧನೆ ಇರುವುದಿಲ್ಲ.
ಪತ್ತನಾಜೆ ಯಕ್ಷಗಾನ ಪ್ರದರ್ಶನ ಸಂದರ್ಭ ಕ್ಷೇತ್ರದ ಅನುವಂಶಿಕ ಅಸ್ರಣ್ಣರು ಮತ್ತು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ,
ಆಡಳಿತ ಮೊಕ್ತೇಸರರಾದ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಸೇರಿದಂತೆ ಕ್ಷೇತ್ರದ ಸರ್ವರೂ ಉಪಸ್ಥಿತರಿದ್ದರು.