ಮಂಗಳೂರು: ನಗರದ ಹೊರವಲಯದ ಮುಕ್ಕ ಪ್ರದೇಶದಲ್ಲಿ ಹುಚ್ಚು ನಾಯಿಗಳ ಕಾಟ ಹೆಚ್ಚಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಮುಕ್ಕ, ಮಲ್ಲಮಾರ್, ದೊಂಬೇಲ್, ದೊಂಬೇಲ್‌ಬೀಚ್, ಶರತ್ ಬಾರ್ ರಸ್ತೆ ಸೇರಿದಂತೆ ಸುತ್ತಮುತ್ತ ಹುಚ್ಚುನಾಯಿಗಳ ಕಾಟ ಅತಿರೇಕಕ್ಕೆ ಹೋಗಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ, ಮಲ್ಲಮಾರ್ ನಿವಾಸಿ ಸಂತೋಷ್ ಎಂಬವರ ಮನೆಯ ಒಳಗೇ ಪ್ರವೇಸಿದ ಹುಚ್ಚು ನಾಯಿಯೊಂದು ಸಂತೋಷ್ ಹಾಗೂ ಅವರ ಮಗಳ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿತ್ತು.
ಸಂತೋಷ್ ಅವರ ಕಾಲಿಗೆ ಗಂಭೀರ ಗಾಯಗಳಾಗಿತ್ತು. ಮತ್ತು ಅವರ ಮಗಳ ಕೈ ಮತ್ತು ಕಾಲಿಗೆ ಕಚ್ಚಿ ಹುಚ್ಚು ನಾಯಿ ನಾಪತ್ತೆಯಾಗಿತ್ತು.
ಬಳಿಕ ನೆರೆಹೊರೆಯವರು ಅವರಿಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆದಾಖಲಿಸಿ ಚಿಕಿತ್ಸೆ ನೀಡಿದ್ದರು. ಹುಚ್ಚು ನಾಯಿ ಕಡಿತದಿಂದ ಗಂಭೀರ ಗಾಯಗೊಂಡಿದ್ದ ಸಂತೋಷ್ ಅವರ ಮಗಳ ಕೈಯ ನರ ತುಂಡಾಗಿತ್ತು ಮತ್ತು ಕಾಲಿಗೂ ಗಂಭೀರ ಸ್ವರೂಪದ ಗಾಯವಾಗಿತ್ತು.
ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಗೆ ಹಿಂದಿರುಗಿದ್ದಾರೆ. ಘಟನೆಯ ಬಳಿಕ ಸ್ಥಳೀಯರು ಬೆಳಗ್ಗಿನ ವೇಳೆಯೇ ಮನೆಯ ಬಾಗಿಲು ತೆರೆಯಲು ಭಯ ಪಡುವಂತಾಗಿದೆ.
ಅಲ್ಲದೆ, ಅಂಗಡಿ ಮತ್ತಿತರ ಕಡೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದು ಗುಂಪು ಗುಂಪಾಗಿ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.