ಸುಳ್ಯ: ಮುಖ್ಯಮಂತ್ರಿಗಳು ತಮ್ಮ ಭರವಸೆಯನ್ನು ಈಡೇರಿಸಲು ವಿಫಲರಾದಲ್ಲಿ ಅವರ ಮನೆ ಮುಂದೆ ಹಿಂದು ಸಂಘಟನೆಗಳೊಂದಿಗೆ ಧರಣಿ ಮಾಡುತ್ತೇವೆ. ನಿಮ್ಮ ಮುಖಕ್ಕೆ ಮಸಿ ಬಳಿಯಬೇಕಾಗುತ್ತದೆ. ದ್ರೋಹ ಮಾಡಬೇಡಿ. ಮೋಸ ಮಾಡಬೇಡಿ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನಿನ್ನೆ ಭೇಟಿ ನೀಡಿದರು.
ಬಳಿಕ ಮಾತನಾಡಿದ ಅವರು ‘ಹಿಂದು ಮುಖಂಡ ಪ್ರವೀಣ್ ನೆಟ್ಟಾರು ಮನೆಮಂದಿಗೆ ಸರಕಾರಿ ಉದ್ಯೋಗವನ್ನು ತೆಗೆಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಪ್ರವೀಣ್ ಧರ್ಮಪತ್ನಿಗೆ ತಮ್ಮ ಕಚೇರಿಯಲ್ಲೇ ಸರಕಾರಿ ಕೆಲಸ ಕೊಡುವುದಾಗಿ ತಿಳಿಸಿದ್ದಾರೆ.
ಅದನ್ನು ಕೂಡಲೇ ನೆರವೇರಿಸಬೇಕು. ಹಿಂದೆಯೂ ಇದೇ ರೀತಿಯ ಆಶ್ವಾಸನೆ ನೀಡಿ ಈಡೇರಿಸಿಲ್ಲ.
ಯಾವುದೇ ಕಾರಣಕ್ಕೂ ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗೆ ಜಾಮೀನು ನೀಡಬಾರದು. ಜಾಮೀನು ನೀಡಿದ್ದೇ ಆದಲ್ಲಿ ಹಿಂದೂ ಸಮಾಜ ಸುಮ್ಮನಿರಲ್ಲ.
ಕೃತ್ಯ ಎಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದರು.