ಮೂಡುಬಿದಿರೆ: ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಪ್ರಾಮಾಣಿಕ ಸಿಎಂ ಆಗಿದ್ರೆ ತಮ್ಮ ಪಕ್ಷದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನನ್ನು ತಮ್ಮ ಸಚಿವ ಸಂಪುಟದಿಂದ ಕೈಬಿಟ್ಟು ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮುಖ್ಯಮಂತ್ರಿಗೆ ಸವಾಲು ಹಾಕಿದರು.
ಅವರು ಕಮೀಷನ್ ದಂಧೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರ ಸಾವಿಗೆ ಕಾರಣೀಕರ್ತರಾಗಿರುವ ಸಚಿವ ಈಶ್ವರಪ್ಪನ ವಿರುದ್ಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಕಮಿಷನ್ ದಂಧೆಯಿಂದಾಗಿ ಬೆಳಗಾವಿ ಮೂಲದ ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಈಶ್ವರಪ್ಪನವರ ಹೆಸರು ಬರೆದಿಟ್ಟು ಉಡುಪಿಯಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದರೂ ಈವರೆಗೆ ಪೊಲೀಸರು ಅವರನ್ನು ಬಂಧಿಸಿಲ್ಲ.
ಆದಷ್ಟು ಶೀಘ್ರವಾಗಿ ಕೆ.ಎಸ್ ಈಶ್ವರಪ್ಪನನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹ ಮಾಡುತ್ತದೆ, ಹಾಗೆಯೇ ಈ ಬಗ್ಗೆ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಹಠಾವೋ ಹಠಾವೋ ಈಶ್ವರಪ್ಪ ಹಠಾವೋ, ಭ್ರಷ್ಟ ಬಿಜೆಪಿ ಪಕ್ಷಕ್ಕೆ ಹಾಗೂ ಬಿಜೆಪಿ ಅಧಿಕಾರಿಗಳಿಗೆ ಧಿಕ್ಕಾರ ದಿಕ್ಕಾರ ಘೋಷಣೆ ಕೂಗುವುದರ ಮೂಲಕ ಕರ್ನಾಟಕದಲ್ಲಿ ಮಾನಹಾನಿ ಮಾಡಿದ ಬಿಜೆಪಿ ಸಚಿವರಿಗೂ ಧಿಕ್ಕಾರ ಹೇಳಿದರು.
ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮಿಥುನ್ ರೈ ಮಾತನಾಡಿ ‘ಕಮೀಷನ್ ದಂಧೆಯಿಂದ ಗುತ್ತಿಗೆದಾರನನ್ನು ಕೊಲೆ ಮಾಡಿರುವ ಆರೋಪಿ ಈಶ್ವರಪ್ಪನನ್ನು ಬಿಜೆಪಿ ಪಕ್ಷವು ರಕ್ಷಣೆ ಮಾಡುತ್ತಿದೆ. ಅಲ್ಲದೆ ಕಾಂಗ್ರೆಸ್ ಪಕ್ಷವು ಮಾಡುತ್ತಿರುವ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಧರ್ಮದ ವಿಷ ಬೀಜವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ’ ಎಂದು ಆರೋಪಿಸಿದರು.
ಬಡ ಜನರಿಗೆ, ಮಾಧ್ಯಮ ವರ್ಗದವರಿಗೆ ಇಲ್ಲಿ ರಕ್ಷಣೆ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಶ್ರೀಮಂತರನ್ನೂ ಕಮೀಷನ್ ದಂಧೆ ಬಿಡುವುದಿಲ್ಲ. ಆದ್ದರಿಂದ ಸಾಮಾನ್ಯ ಖೈದಿಗೆ ಶಿಕ್ಷೆ ಆಗುವಂತೆ ಈಶ್ವರಪ್ಪನಿಗೂ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ ಅವರು ಎಲ್ಲಿಯವರೆಗೆ ಜೈಲಿಗೆ ಕಳುಹಿಸುದಿಲ್ಲವೋ ಅಲ್ಲಿಯ ತಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ಈ ಕಮಿಷನ್ ದಂಧೆಯಲ್ಲಿ 40 ಕಮಿಷನ್ ಕಬಳಿಸಿದ ಏನು ಆರೋಪ ಇದೆಯಾ ಈ ಆರೋಪ ಕಾಂಗ್ರೆಸ್ ಪಕ್ಷ ಮಾಡಿದ್ದಲ್ಲ. ಅದು ಲಿಖಿತವಾಗಿ ಗುತ್ತಿಗೆದಾರರೇ ಮಾಡಿರುವ ಆರೋಪವಾಗಿದೆ. ಅಷ್ಟೇ ಅಲ್ಲದೆ ಪೋಸ್ಟ್ ಮೂಲಕ ಪ್ರಧಾನಿಗೆ ಕೂಡ ಪತ್ರವನ್ನು ಹಾಕಿದ್ದರು.
ಆದ್ರೆ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದೆ ಅಮಾಯಕ ಸಂತೋಷ್ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯಲ್ಲ, ಇದು ಕೊಲೆ ಎಂಬುದಾಗಿ ಹೇಳಲು ನಾನು ಇಚ್ಛಿಸುತ್ತೇನೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಪುರಸಭಾ ಸದಸ್ಯರಾದ ಕೊರಗಪ್ಪ, ಪಿ.ಕೆ.ಥೋಮಸ್, ಸುರೇಶ್ ಕೋಟ್ಯಾನ್, ಪುರಂದರ ದೇವಾಡಿಗ, ಹಿದಾಯತ್ತುಲ್ಲಾ, ಇಕ್ಬಾಲ್ ಕರೀಂ, ಸುರೇಶ್ ಪ್ರಭು, ಪುತ್ತಿಗೆ ಗ್ರಾ.ಪಂ ಸದಸ್ಯರಾದ ಮುರಳೀಧರ್ ಕೋಟ್ಯಾನ್,
ವಾಲ್ಪಾಡಿ ಗ್ರಾ.ಪಂ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪಡುಮಾರ್ನಾಡು ಗ್ರಾ.ಪಂ. ಉಪಾಧ್ಯಕ್ಷ ಅಭಿನಂದನ್ ಬಲ್ಲಾಳ್, ಮುಖಂಡರಾದ ರಾಜೇಶ್ ಕಡಲಕೆರೆ, ಶಿವಾನಂದ ಪಾಂಡ್ರು, ಜೋಕಿಂ ಕೊರೆಯಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿ ಬಿಜೆಪಿ ಹಠಾವೋ ಘೋಷಣೆಯನ್ನು ಕೂಗಿದರು.
ತಹಶೀಲ್ದಾರ್ ಪುಟ್ಟರಾಜು ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.