ಹೆದ್ದಾರಿ ಹೊಂಡ ಮುಚ್ಚಿ ಸಂಬಂಧಪಟ್ಟ ಇಲಾಖೆಗೆ ಬಿಸಿ ಮುಟ್ಟಿಸಿದ ಜ್ಯುವೆಲ್ಲರಿ ಶಾಪ್ ಮಾಲಕ..!!
ಉಡುಪಿ: ಉಡುಪಿಯಲ್ಲಿ ಮಳೆಗಾಲದಲ್ಲಿ ರಸ್ತೆ ಹೊಂಡಗಳು ವಾಹನ ಸವಾರರಿಗೆ ಸಾಕಷ್ಟು ಸಂಕಷ್ಟ ತಂದೊಡ್ಡುತ್ತಿವೆ.
ಇತ್ತೀಚೆಗಷ್ಟೆ ಡಾಮರೀಕರಣಗೊಂಡ ರಸ್ತೆಗಳಲ್ಲೂ ಹೊಂಡಗಳು ಬೀಳುತ್ತಿದ್ದು, ವಾಹನ ಸವಾರರು ಹಿಡಿ ಶಾಪ ಹಾಕುತ್ತಿದ್ದಾರೆ.
ಇದರ ಮಧ್ಯೆಯೇ ಉಡುಪಿಯ ಜ್ಯುವೆಲ್ಲರಿ ಶಾಪ್ ಮಾಲಕರೋರ್ವರು ತಾವೇ ರಾಜ್ಯ ಹೆದ್ದಾರಿಯ ಹೊಂಡ ಮುಚ್ಚುವ ಮೂಲಕ ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಉಡುಪಿ ಸರ್ವಿಸ್ ಬಸ್ ನಿಲ್ದಾಣ ಬಳಿಯ “ನ್ಯೂ ಮಂಗಳ ಜುವೆಲ್ಲರ್ಸ್”’ ನ ಮಾಲಕ ಯೋಗೀಶ್ ಆಚಾರ್ಯ.
ತಮ್ಮ ಮನೆ ಕಡೆ ಹೋಗುವ ರಾಜ್ಯ ಹೆದ್ದಾರಿ ಕುಕ್ಕಿಕಟ್ಟೆ ರೈಲ್ವೆ ಬ್ರಿಡ್ಜ್ ನ ಬೃಹತ್ ಗುಂಡಿಯನ್ನು ಕಾಂಕ್ರಿಟ್ ಹಾಕಿ ಮುಚ್ಚಿ ಜನರ ಶ್ಲಾಘನೆಗೆ ಒಳಗಾಗಿದ್ದಾರೆ.
ಕುಕ್ಕಿಕಟ್ಟೆ ರೈಲ್ವೆ ಸೇತುವೆಯಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ಒಂದೇ ಮಳೆಯಲ್ಲಿ ಇತ್ತೀಚೆಗೆ ಡಾಮರೀಕರಣಗೊಂಡ ರಸ್ತೆಯಲ್ಲಿ ಬೃಹತ್ ಹೊಂಡಗಳು ಬಿದ್ದಿವೆ.
ಇದರಿಂದ ವಾಹನ ಸಂಚಾರಕ್ಕೆ ಬಹಳ ಅಡಚಣೆ ಉಂಟಾಗುತಿತ್ತು. ಈ ಭಾಗದಲ್ಲಿ ಚರಂಡಿಯ ಹೂಳೆತ್ತಿ ರಸ್ತೆ ಬದಿಯಲ್ಲಿ ಹಾಕಿದ್ದು, ಮಳೆಗೆ ಮತ್ತೆ ಚರಂಡಿ ಸೇರುತ್ತಿದೆ.
ಟೆಂಡರ್ ದಾರರಿಗೆ ಅದನ್ನು ವಿಲೇವಾರಿ ಮಾಡಬೇಕೆಂಬ ಷರತ್ತು ಇದ್ದರೂ ಅದನ್ನು ಪಾಲಿಸದಿರುವ ಬಗ್ಗೆ ಸ್ಥಳೀಯರು ಅಸಮಾಧನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನಲೆ ಇಂದು (ಜೂನ್ 29) ಯೋಗೀಶ್ ಆಚಾರ್ಯ ಸ್ಥಳೀಯರ ನೆರವಿನಿಂದ ತಾವೇ ಹೊಂಡ ಮುಚ್ಚುವ ಮೂಲಕ ಸಂಬಂಧಪಟ್ಟ ಇಲಾಖೆಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು.