ಮಂಗಳೂರು: ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರಕುಸಿತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಮುಂಜಾನೆ ಭಾರೀ ಮಳೆಯಾಗಿದೆ.
ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಗುಡುಗು ಮಿಂಚಿನ ಸಹಿತ ಸಾಧಾರಣ ಮಳೆಯಾಗಿದೆ.
ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರಕುಸಿತ ಆಗಿರುವ ಕಾರಣ ಮುಂದಿನ ಒಂದೆರಡು ದಿನಗಳಲ್ಲಿ ವಿವಿಧೆಡೆ ಮಳೆಯಾಗುವ ಸಾದ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
ಅದರಂತೆ ನಿನ್ನೆ ತಡರಾತ್ರಿಯೂ ಮಳೆ ಸುರಿದಿತ್ತು. ಬೆಳಗ್ಗೆ 6 ಗಂಟೆಯಿಂದಲೇ ಮತ್ತೆ ಗುಡುಗು ಮಿಂಚಿನ ಸಹಿತ ಮಳೆ ಸುರಿಯುತ್ತಿದೆ.
ರಸ್ತೆಯೆಲ್ಲಾ ಕಸದಿಂದ ಬ್ಲಾಕ್
ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಜೊತೆಗೆ ತರಗೆಲೆ, ಭಾರೀ ಪ್ರಮಾಣದ ಕಸದಿಂದ ಮಂಗಳೂರು ನಗರದಾದ್ಯಂತ ಮಳೆ ನೀರು ಚರಂಡಿ ಬಿಟ್ಟು ರಸ್ತೆಯಲ್ಲೆಲ್ಲಾ ಹರಿದಿದೆ. ನಗರದ ಹಂಪನಕಟ್ಟೆಯ ಬಳಿ ಅಂಗಡಿ ಮುಂಗಟ್ಟಿಗೆ ನೀರು ನುಗ್ಗಿ ಹಾನಿಯಾಗಿದೆ.
ಅಂಗಡಿಯೊಳಗೆ ನುಗ್ಗಿ ಅಪಾರ ಹಾನಿ
ಮಂಗಳೂರಿನಲ್ಲಿ ಇಂದು ನಸುಕಿನ ಜಾವ ಸುರಿದ ಏಕಾಏಕಿ ಮಳೆಗೆ ಕೃತಕ ನೆರೆ ಸೃಷ್ಟಿಯಾಗಿದ್ದು, ಮಂಗಳೂರಿನಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೃತಕ ನೆರೆ ಸೃಷ್ಟಿಯಾಗಿ ಕ್ಲಾಕ್ ಟವರ್ ಬಳಿ ಇರುವ ಕ್ಯಾಂಪಸ್ ಗಿಫ್ಟ್ ಸೆಂಟರ್ ಹೆಸರಿನ ಅಂಗಡಿಯೊಳಗೆ ನುಗ್ಗಿ ಅಪಾರ ಹಾನಿ ಉಂಟಾದ ಘಟನೆ ನಡೆದಿದೆ.
ಇಂದು ಮುಂಜಾನೆ ಅಂಗಡಿ ಬಾಗಿಲು ತೆರೆಯಲು ಬಂದ ಮಾಲಕರು ಸ್ಮಾರ್ಟ್ ಸಿಟಿ ಅವ್ಯವಸ್ಥೆಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತವಾಗಿ ಚರಂಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿರದ ಕಾರಣ ಗಲ್ಲಿಟ್ರಾಪ್ ಮೂಲಕ ಚರಂಡಿಗೆ ಸೇರಿ ಸರಾಗವಾಗಿ ಹರಿದು ಹೋಗಬೇಕಾಗಿದ್ದ ನೀರು ಹರಿದು ಹೋಗದೇ ಸೀದಾ ಗಿಫ್ಟ್ ಸೆಂಟರ್ ಒಳಗಡೆ ನುಗ್ಗಿದೆ.
ಮಂಗಳೂರಿನಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿಯ ಅವೈಜ್ಞಾನಿಕ ಕಾಮಗಾರಿ, ಮಂಗಳೂರು ನಗರ ಪಾಲಿಕೆಯಿಂದ ನಿರ್ವಹಣೆಯಾಗುತ್ತಿರುವ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದಾಗಿ ನೀರು ಸರಿಯಾಗಿ ಚರಂಡಿಯಲ್ಲಿ ಹೋಗದೇ
ಅಂಗಡಿಯೊಳಗೆ ನುಗ್ಗಿದೆ ಎಂದು ಕ್ಯಾಂಪಸ್ ಗಿಫ್ಟ್ ಸೆಂಟರ್‌ನ ಮಾಲಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಅಂಗಡಿಯ ಸಿಬ್ಬಂದಿ ಮೊಣಕಾಲಿನವರೆಗೆ ತುಂಬಿದ್ದ ನೆರೆ ನೀರನ್ನು ಹೊರಕ್ಕೆ ಚೆಲ್ಲಿ ಸ್ವಚ್ಛಗೊಳಿಸಿದರು.