ಮಂಗಳೂರು: ತೆಂಕುತಿಟ್ಟಿನ ಖ್ಯಾತ ಬಣ್ಣದ ವೇಷಧಾರಿ ಹರಿನಾರಾಯಣ ಭಟ್ ಎಡನೀರು ಅವರು ಕದ್ರಿ ಯಕ್ಷ ಬಳಗದವರು ಕೊಡಮಾಡುವ 2022ನೇ ಸಾಲಿನ ಪ್ರತಿಷ್ಠಿತ “ಕದ್ರಿ ವಿಷ್ಣು ಪ್ರಶಸ್ತಿ”ಗೆ ಆಯ್ಕೆ ಆಗಿದ್ದಾರೆ ಎಂದು ಸಂಘಟಕ ಕದ್ರಿ ನವನೀತ ಶೆಟ್ಟಿ ಅವರು ತಿಳಿಸಿದ್ದಾರೆ.
ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಕೋಳ್ಯೂರು ರಾಮಚಂದ್ರರಾಯರಿಂದ ನೃತ್ಯ ಕಲಿತು, ಕಟೀಲು ಮೇಳಕ್ಕೆ ಬಾಲ ಕಲಾವಿದನಾಗಿ ಸೇರಿ ಕೋಡಂಗಿ,ಬಾಲಗೋಪಾಲ ವೇಷಧಾರಿಯಾಗಿ ಹಂತಹಂತವಾಗಿ ಕಲಾಸಾಧನೆ ಮಾಡಿ ಬಣ್ಣದ ವೇಷಧಾರಿಯಾಗಿ ಸಿದ್ದಿ ಪ್ರಸಿದ್ದಿ ಪಡೆದಿರುವ ಹರಿನಾರಾಯಣ ಅವರು ಕಳೆದ 30 ವರ್ಷಗಳಿಂದ ನಿರಂತರವಾಗಿ ಶ್ರೀ ಕಟೀಲು ಮೇಳದಲ್ಲಿ ಕಲಾವ್ಯವಸಾಯ ಮಾಡುತ್ತಿದ್ದಾರೆ.
ಋತುಪರ್ಣ, ರಕ್ತಬೀಜಾಸುರ, ಶಿಶುಪಾಲ,ಹಿರಣ್ಯಾಕ್ಷ ,ಅರ್ಜುನ ಮೊದಲಾದ ಪಾತ್ರಗಳಲ್ಲಿ ಕದ್ರಿ ,ಕಟೀಲು ಮೇಳಗಳಲ್ಲಿ ಮೆರೆದಿದ್ದ ಖ್ಯಾತ ರಾಜವೇಷಧಾರಿ ಕೀರ್ತಿಶೇಷ ಕದ್ರಿ ವಿಷ್ಣು ಅವರ ಸ್ಮರಣಾರ್ಥ ಕದ್ರಿಯ ಯಕ್ಷ ಬಳಗದವರು ಸಾಧಕ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ.
ನವೆಂಬರ್ 25 ಶುಕ್ರವಾರ ಶ್ರೀ ಕ್ಷೇತ್ರ ಕದ್ರಿಯಲ್ಲಿ ನಡೆಯಲಿರುವ ಶ್ರೀ ಕಟೀಲು ಮೇಳದ ಸೇವೆಯಾಟದ ಸಂದರ್ಭದಲ್ಲಿ ಸಂಮಾನ ಕಾರ್ಯಕ್ರಮ ಜರಗಲಿದೆ.