ಬೆಂಗಳೂರು : ಭಾರತವು ಕೊರೋನಾ 2ನೇ ಅಲೆಯ ವಿರುದ್ಧ ನಿರ್ಣಾಯಕ ಹೋರಾಟ ಸಡೆಸುತ್ತಿರುವ ಸಮಯದಲ್ಲೇ, ಅಪಾಯಕಾರಿ ಡೆಲ್ಟಾ ರೂಪಾಂತರಿ ವೈರಸ್ ಹರಡುವಿಕೆಯು ಇದೀಗ ವೇಗ ಪಡೆದುಕೊಳ್ಳುತ್ತಿದೆ.ಇದೀಗ ಮೈಸೂರಿನಲ್ಲೂ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣ ಪತ್ತೆಯಾಗಿದೆ.
ಇದು ಜನತೆಯನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.ಕೋವಿಡ್ ಸಾಂಕ್ರಾಮಿಕ ಡೆಲ್ಟಾ ರೂಪಾಂತರವು ‘ಡೆಲ್ಟಾ ಪ್ಲಸ್(Delta Plus) ಅಥವಾ ಎವೈ.1(AY.1) ರೂಪಾಂತರವಾಗಿ ಪರಿವರ್ತನೆಗೊಂಡಿದೆ. ಇದು ಬಹಳ ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಡೆಲ್ಟಾ ಪ್ಲಸ್ ಅಥವಾ ಬಿ.1.617.2.1(B.1.617.2.1) ರೂಪಾಂತರಿ ಭಾರತದಲ್ಲಿ ಮೊದಲು ಪತ್ತೆಯಾಗಿದ್ದು ದೇಶದಲ್ಲಿ 22 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 16 ಪ್ರಕರಣಗಳು ಮಹಾರಾಷ್ಟ್ರ, ಕೇರಳ ಮತ್ತು ಮಧ್ಯ ಪ್ರದೇಶದಲ್ಲಿ ಕಂಡು ಬಂದಿತ್ತು. ಆದರೆ, ಇದೀಗ ಮೈಸೂರಿನಲ್ಲೂ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣ ಪತ್ತೆಯಾಗಿದೆ.
ವೈದ್ಯಕೀಯ ಸಚಿವ ಡಾ. ಸುಧಾಕರ್ ಡೆಲ್ಟಾ ವೈರಸ್ ಪತ್ತೆಯಾಗಿರುವದನ್ನು ಧೃಡಪಡಿಸಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಸುಧಾಕರ್, “ಮೈಸೂರಿನಲ್ಲಿ ಒಂದು ಡೆಲ್ಟಾ + ಕೇಸ್ ಪತ್ತೆಯಾಗಿದೆ.
ಆ ರೋಗಿಯನ್ನ ಐಸೋಲೇಟ್ ಮಾಡಲಾಗಿದೆ. ಯಾವುದೇ ರೋಗ ಲಕ್ಷಣ ರೋಗಿಗೆ ಇಲ್ಲ. ಆತನ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕದಲ್ಲಿ ಇರೋರಿಗೆ ಸೋಂಕು ಹರಡಿಲ್ಲ. ಡೆಲ್ಟಾ ಪ್ಲಸ್ ಕೇಸ್ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸುತ್ತಿದ್ದೇವೆ.
ಜಿಲ್ಲೆಯಲ್ಲಿ ಜಿನೋಮ್ ಲ್ಯಾಬ್ ಗಳನ್ನು ಕೂಡಾ ಸೆಟಪ್ ಮಾಡಲಾಗುತ್ತಿದೆ. 6 ಲ್ಯಾಬ್ ಕರ್ನಾಟಕದಲ್ಲಿ ಮಾಡಲು ನಿರ್ಧಾರ ಮಾಡಿದ್ದೇವೆ. ಡೆಲ್ಟಾ ಪ್ಲಸ್ ಬಗ್ಗೆ ನಿರಂತರವಾಗಿ ಗಮನಹರಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
ಡೆಲ್ಟಾ ಪ್ಲಸ್ ರೂಪಾಂತರ ಕಂಡುಬರುವ ಜಿಲ್ಲೆಗಳು ಮತ್ತು ಕ್ಲಸ್ಟರ್‌ಗಳಲ್ಲಿ ತಕ್ಷಣದ ನಿಯಂತ್ರಣ ಕ್ರಮಗಳು, ವರ್ಧಿತ ಪರೀಕ್ಷೆ, ಟ್ರ್ಯಾಕಿಂಗ್ ಮತ್ತು ವ್ಯಾಕ್ಸಿನೇಷನ್ ತೆಗೆದುಕೊಳ್ಳುವಂತೆ ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಅಲ್ಲದೆ, ಸೋಂಕಿತ ವ್ಯಕ್ತಿಗಳ ಮಾದರಿಗಳನ್ನು ತಕ್ಷಣವೇ INSACOG ನ ಗೊತ್ತುಪಡಿಸಿದ ಪ್ರಯೋಗಾಲಯಗಳಿಗೆ ಕಳುಹಿಸಲಾಗುವುದು. ಇದರಿಂದ ಕ್ಲಿನಿಕಲ್ ಸಾಂಕ್ರಾಮಿಕ ರೋಗ ಸಂಬಂಧಗಳನ್ನು ಮಾಡಬಹುದು” ಎಂದು ತಿಳಿಸಿದ್ದಾರೆ.