ಜಬಲ್ಪುರ: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತವಾಗಿ ಬಸ್ಸು ಎರಡು ವಾಹನಗಳಿಗೆ ಢಿಕ್ಕಿ ಹೊಡೆದು ಇಬ್ಬರು ಮೃತ ಪಟ್ಟ ಘಟನೆ ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಸಂಭವಿಸಿದೆ.
ಸಿಟಿ ಬಸ್ ಒಂದು ಮಾರ್ಗದಲ್ಲಿ ಬರುವ ವೇಳೆ ಜಬಲ್ಪುರ ಟ್ರಾಫಿಕ್ ಸಿಗ್ನಲ್ ಬಳಿ ಏಕಾಏಕಿ ಪಥ ಬದಲಿಸಿ ಅಡ್ಡಾದಿಡ್ಡಿಯಾಗಿ ಚಲಿಸಿದೆ.
ಪಕ್ಕದಲ್ಲಿರುವ ರಿಕ್ಷಾವೊಂದಕ್ಕೆ ಢಿಕ್ಕಿಯಾದ ಬಳಿಕ, ಬಸ್ ಬ್ರೇಕ್ ಫೇಲ್ ಆದ ರೀತಿ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದ ವಾಹನಗಳಿಗೆ ಸರಣಿ ಢಿಕ್ಕಿ ಹೊಡೆದಿದೆ.
ಕೆಲವು ದ್ವಿಚಕ್ರ ವಾಹನಗಳನ್ನು ಎಳೆದಾಡಿಕೊಂಡು ಹೋಗಿದೆ. ಬಸ್ಸಿನಡಿ ಬಿದ್ದ ಪರಿಣಾಮ ಇಬ್ಬರು ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಟೇರಿಂಗ್ ಮೇಲೆ ಬಿದ್ದಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಚಾಲಕನಿಗೆ ಹಠಾತ್ ಹೃದಯಾಘಾತವಾಗಿ, ಅವರು ಮೃತ ಪಟ್ಟಿರುವುದು ಗೊತ್ತಾಗಿದೆ. ಈ ಅಪಘಾತದ ದೃಶ್ಯ ಅಲ್ಲಿರುವ ಟ್ರಾಫಿಕ್ ಸಿಗ್ನಲ್ ಲೈಟ್ ಬಳಿ ಇರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಸ್ಸು ಗೋಲಾಪುರ ಕಡೆಯಿಂದ ರನಿತಾಲ್ ಕಡೆಗೆ ಹೋಗುತ್ತಿತ್ತು.