ಮಂಗಳೂರು: ತುಂಬೆಯಿಂದ ಮಂಗಳೂರು ನಗರದ ಕೆಲವು ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಬೃಹತ್ ಭೂಗತ ಪೈಪ್‌ಲೈನ್ ಜೂನ್ 28ರಂದು ಪಂಪ್ವೆಲ್ ಫ್ಲೈಓವರ್ ಬಳಿ ಒಡೆದು ಹೋಗಿತ್ತು.
ಇದೀಗ ಒಡೆದು ಹೋಗಿದ್ದ ಪೈಪನ್ನು ಪತ್ತೆ ಹಚ್ಚಲಾಗಿದ್ದು, ಶೀಘ್ರವೇ ದುರಸ್ತಿ ಕಾಮಗಾರಿ ನಡೆಸಿ ನೀರು ಪೂರೈಕೆ ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ.
ಚಿಲಿಂಬಿ, ಅಶೋಕನಗರ, ದಂಬೇಲ್ ಪರಿಸರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಇದು ಕಾಸ್ಟ್ ಐಯರ್ನ್ ನಿರ್ಮಿತ 500 ಎಂ ಎಂ ಪೈಪ್ ಆಗಿದ್ದು, 2 ಎಂಜಿಡಿಯಲ್ಲಿ ನೀರು ಪೂರೈಕೆ ಮಾಡುತ್ತಿತ್ತು.
ಸದ್ಯ ಮಳೆ ಸುರಿಯುತ್ತಿರುವ ಕಾರಣ ದುರಸ್ತಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇನ್ನೆರಡು ದಿನಗಳ ಕಾಲ ತಗಲುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಪ್ವೆಲ್ ರಾಷ್ಟ್ರೀಯ ಹೆದ್ದಾರಿ 66ರ ಮೇಲ್ಸೇತುವೆ ಕೆಳಭಾಗದಲ್ಲಿ ಬಂಟ್ವಾಳ ಕಡೆಗೆ ಸಾಗುವ ರಸ್ತೆಯ ಮಧ್ಯಭಾಗದಲ್ಲಿಯೇ ಪೈಪ್ ಒಡೆದು ಹೋದ ಕಾರಣ ಇಲ್ಲಿ ನೀರು ಕಾರಂಜಿಯಂತೆ ಚಿಮ್ಮಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಇದೀಗ ನಿಧಾನಗತಿಯಲ್ಲಿ ವಾಹನಗಳು ಸಾಗುತ್ತಿವೆ. 1956ರಲ್ಲಿ ಅಳವಡಿಸಿದ ಹಳೆ ಪೈಪ್ ಇದಾಗಿದ್ದು, ತುರ್ತು ದುರಸ್ತಿ ಕಾಮಗಾರಿ ಬಳಿಕ ಇಲ್ಲಿ ಸಂಚಾರ ಸುಗಮವಾಗಲಿದೆ.