Monday, August 8, 2022

ಶಾಂತಿ-ಕ್ರಾಂತಿಯ ಹರಿಕಾರ ಜನಾರ್ದನ ಪೂಜಾರಿ ‘ಮಹಾ ಗೌರವ’ ಕ್ಕೆ ಕಾಲ ಸನ್ನಿಹಿತ

ಬಿಳಿ ಶರ್ಟು, ಬಿಳಿ ಪ್ಯಾಂಟು, ಮುಖದಲ್ಲಿ ತೆಳ್ಳಗಿನ ಕಪ್ಪು ಮೀಸೆ, ಜೊತೆಗೆ ಕಣ್ಣಿಗೆ ದಪ್ಪ ಪಟ್ಟಿಯ ಆ್ಯಂಟಿಕ್‌ ಲುಕ್‌ ಕನ್ನಡಕ ದಟ್‌ ಇಸ್‌ ಬಿ. ಜನಾರ್ದನ ಪೂಜಾರಿ.

ಕರಾವಳಿಯ ಹಿರಿಯ ಮುತ್ಸದ್ದಿ, ಮಾಜಿ ಕೇಂದ್ರ ಸಚಿವ, ನೇರ ನಡೆನುಡಿಯ, ಪ್ರಾಮಾಣಿಕ, ಸಾಲ ಮೇಳದ ರೂವಾರಿ ಬಿ.ಜನಾರ್ದನ ಪೂಜಾರಿ ಈಗ ತಮ್ಮ ಜೀವನದ ಮುಸ್ಸಂಜೆಯಲ್ಲಿದ್ದಾರೆ. ಈಗ ಬಂಟ್ವಾಳದ ಬಸ್ತಿಪಡ್ಪುವಿನ ‘ಚೆನ್ನಮ್ಮ ಕುಟೀರ’ದಲ್ಲಿ ತನ್ನ ಇಳಿವಯಸ್ಸಿನಲ್ಲಿ ಗತಕಾಲದ ದಿನಗಳನ್ನು ಮೆಲುಕುಹಾಕುತ್ತಾ ಕುಟುಂಬದೊಂದಿಗೆ ಜೀವನ ಕಳೆಯುತ್ತಿದ್ದಾರೆ.

ಅವರು ಕರಾವಳಿಗೆ ನೀಡಿದ ವಿಶೇಷ ಕೊಡುಗೆ, ಹೊಸ ಚಿಂತನೆಯ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು. ಹೊಸ ಮುನ್ನುಡಿ ಬರೆದಿದ್ದಾರೆ. ಜೊತೆಗೆ ಸಮಾನ ಸಾಮಾಜಿಕ ಚಿಂತನೆ, ಹತ್ತಾರು ಜನಪರ ಯೋಜನೆ ಜಾರಿಗೆ ತಂದ ಅವರು ರಾಜಕೀಯ ಕ್ಷೇತ್ರದಲ್ಲಿ ಅಜರಾಮರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜನಾರ್ದನ ಪೂಜಾರಿ ಅವರಿಗೆ ಪಕ್ಷಬೇಧ, ಜಾತಿ, ಮತಗಳನ್ನು ಮರೆತು ‘ ಸಾರ್ವಜನಿಕ ಮಹಾ ಗೌರವ ಸಮಾರಂಭ’ ನಡೆಸಬೇಕು ಎಂಬುವುದು ಬಹುಕರಾವಳಿಗರ ಒಕ್ಕೊರಲಿನ ಅಭಿಪ್ರಾಯವಾಗಿದೆ.

ಬಂಟ್ವಾಳದ ಅತೀ ಹಿಂದುಳಿದ ಬಸ್ತಿಪಡ್ಪುವಿನಿಂದ ದೆಹಲಿಯ ಜನಪಥ್‌ವರೆಗೆ ಅತ್ಯಂತ ಪ್ರಭಾವ ಹೊಂದಿದ್ದ ಕರ್ನಾಟಕದ ಏಕೈಕ ರಾಜಕಾರಣಿ ಎಂದರೆ ಬಿ.ಜನಾರ್ದನ ಪೂಜಾರಿ. ಪೂಜಾರಿ ಅವರಿಗೆ ರಾಜಕೀಯವಾಗಿ ಪಕ್ಷದ ಒಳಗೆ ಮತ್ತು ಹೊರಗೆ ರಾಜಕೀಯ ವಿರೋಧಿಗಳಿರಬಹುದು. ಆದರೆ ಅವರ ಪ್ರಾಮಾಣಿಕತೆ ಬಗ್ಗೆ ಸಾಸಿವೆ ಕಾಳಿನಷ್ಟೂ ದೂರುವಂತಿಲ್ಲ. ಅವರ ನೇರನುಡಿ ಕೆಲವರಿಗೆ ಕಹಿ ಅನಿಸಿರಬಹುದು ಆದರೆ ಅದರಲ್ಲಿ ಸತ್ಯಗಳು ಇತ್ತು ಎನ್ನುವುದನ್ನು ಅವರ ವಿರೋಧಿಗಳು ಒಪ್ಪಿಕೊಳ್ಳುತ್ತಾರೆ.

1937ರಲ್ಲಿ ಎಪ್ರಿಲ್ 27 ರಂದು ಮಂಗಳೂರಿನ ಬೊಕ್ಕಪಟ್ಣದಲ್ಲಿ ಹುಟ್ಟಿ  ಬಂಟ್ವಾಳ ‘ಚೆನ್ನಮ್ಮ ಕುಟೀರ’ದಿಂದ ವಕೀಲ ವೃತ್ತಿ ಆರಂಭಿಸಿದರು. ಈ ವೇಳೆ ಕಾಂಗ್ರೆಸ್‌ನ ಸಿದ್ದಾಂತವನ್ನು ಮನಸಾರೆ ಅಪ್ಪಿ, ಒಪ್ಪಿ ಪಕ್ಷದ ಕಾರ್ಯಕರ್ತರಾದರು. 1977ರಲ್ಲಿ ಮೊದಲ ಬಾರಿಗೆ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ನಂತರ 1980ರಲ್ಲಿ ಮತ್ತೆ ಗೆದ್ದು ಬೀಗಿದರು. ಈ ವೇಳೆ ಭಾರತದ ‘ಐರನ್‌ ಲೇಡಿ’ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಅವರ ಕ್ಯಾಬಿನೆಟ್‌ನಲ್ಲಿ ಕೇಂದ್ರ ಸಹಾಯಕ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದರು.

ಬಡವರಿಗೆ ಬ್ಯಾಂಕ್‌ನ ಬಾಗಿಲು ತೆರೆದಿರದ ಸಮಯದಲ್ಲಿ ‘ಸಾಲಮೇಳ’ ಆಯೋಜನೆ ಮಾಡುವ ಮೂಲಕ ಬಡವರು ಬ್ಯಾಂಕ್‌ಗೆ ಬಂದ ವೇಳೆ ಅವರನ್ನು ಚಾ, ಕಾಫೀ ಕೊಟ್ಟು ಸತ್ಕರಿಸಿ ಗೌರವಯುತವಾಗಿ ನಡೆಸಿಕೊಳ್ಳಲು ಆದೇಶಿಸಿದ್ದು ಈಗ ಇತಿಹಾಸ. ಇದರಿಂದ ಅವರಿಗೆ ಹಲವು ಬ್ಯಾಂಕುಗಳಿಂದ ಒತ್ತಡ ಬಂದರೂ ಅದನ್ನು ಡೋಂಟ್‌ ಕೇರ್‌ ಮಾಡದೇ ಅದನ್ನು ಸಮರ್ಥವಾಗಿ ಎದುರಿಸಿದ ಧೀಮಂತ ನಾಯಕ. ಇಂದಿರಾಗಾಂಧಿ ಅವರ ಅತ್ಯಾಪ್ತ ಬಳಗದಲ್ಲಿ ಜನಾರ್ಧನ ಪೂಜಾರಿ ಒಬ್ಬರಾಗಿದ್ದರು. ಕಾರಣ ಪ್ರಾಮಾಣಿಕತೆ. ಪೂಜಾರಿ ‘ಕಾಂಗ್ರೆಸ್‌ನ ಉಸಿರು’ ಎಂದು ಸ್ವತಃ ಇಂದಿರಾ ಗಾಂಧಿ ಅವರಿಂದ ಹೇಳಿಸಿಕೊಂಡ ಏಕೈಕ ವ್ಯಕ್ತಿ. ಇಂದಿರಾಗಾಂಧಿಯ ಹತ್ಯೆ ನಂತರದಲ್ಲಿ ರಾಜೀವ ಗಾಂಧಿಯ ಆಪ್ತ ವಲಯದಲ್ಲೂ ಅದೇ ಗೌರವವನ್ನು ಉಳಿಸಿಕೊಂಡರು.

ದಕ್ಷಿಣ ಕನ್ನಡಕ್ಕೆ ಇವರ ಕೊಡುಗೆ ಅಪಾರವಾದುದು. ಕೆಐಒಸಿಎಲ್‌, ಎಂಆರ್‌ಪಿಎಲ್‌, ಮಂಗಳೂರು ವಿಮಾನ ನಿಲ್ದಾಣ, ಎನ್‌ಐಟಿಕೆ, ಎನ್‌ಎಂಪಿಟಿಯನ್ನು ಉನ್ನತ ದರ್ಜೆಗೇರಿಸಿದ್ದು, ಬಂಟ್ವಾಳದಿಂದ ಸುರತ್ಕಲ್‌ಗೆ ಫ್ಲೈ ಓವರ್‌ ಹೀಗೆ ಹತ್ತು ಹಲವು ಯೋಜನೆಗಳನ್ನು ಕರಾವಳಿಗೆ ತಂದ ಕೀರ್ತಿ ಶ್ರೀನಿವಾಸ ಮಲ್ಯ ಅವರ ನಂತರ ಪೂಜಾರಿಯವರಿಗೆ ಸಲ್ಲುತ್ತದೆ. ಸಂಸತ್ತಿನಲ್ಲಿ ಸದಾ ಬಡವರ ಬಗ್ಗೆ ಧ್ವನಿ ಎತ್ತಿ ನಿರರ್ಗಳವಾಗಿ ಮಾತನಾಡಿ ಉತ್ತಮ ‘ಸಂಸದೀಯ ಪಟು’ ಎಂದು ಹೆಸರು ಪಡೆದಿದ್ದರು.

ಈ ಮಧ್ಯೆ ಕಾಂಗ್ರೆಸ್‌ ಪಕ್ಷವನ್ನು ಬೆಳೆಸಲು ಎಐಸಿಸಿ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಪಕ್ಷಕ್ಕಾಗಿ ದುಡಿದರು. ಎಷ್ಟೋ ಸಲ ಅವರು ಕೈಗೊಳ್ಳುವ ಕಠಿಣ ನಿರ್ಧಾರಗಳಿಂದ ಪಕ್ಷದಲ್ಲಿ  ತೀವ್ರ ವಿರೋಧಗಳು ಬಂದರೂ, ಡೋಂಟ್‌ ಕೇರ್‌ ಅನ್ನದೇ ತನ್ನ ನಿಲುವಿಗೆ ಬದ್ದರಾಗಿರುತ್ತಿದ್ದರು.  ಅವರಿಗೆ ಕೆಲವು ಇತ್ತೀಚಿನ ರಾಜಕೀಯ ನಿರ್ಧಾರಗಳು ಸರಿ ಅನಿಸದಿದ್ದರೂ, ಕೆಲವು ಬಾರಿ ಹಿರಿಯ ನಾಯಕನಿಗೆ ಸಿಗಬೇಕಾದಾಗ ಗೌರವ ಸಿಗದೇ ಇದ್ದ ವೇಳೆ ಎಲ್ಲವನ್ನು ಸಹಿಸಿ ಸುಮ್ಮನಾಗಿದ್ದರು. ಹಲವು ಪತ್ರಿಕಾಗೋಷ್ಠಿಯಲ್ಲಿ ನಾನು ಕಾಂಗ್ರೆಸ್‌ ಪಕ್ಷ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ. ನಾನು ನನ್ನ ಕೊನೆಯ ಉಸಿರು ಇರುವ ವರೆಗೂ ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದರು. ಅವರ ಹಿಂಬಾಲಕರು ಕಾಂಗ್ರೆಸ್‌ ಬಿಟ್ಟು ಹೋದರೂ ಅವರು ಮಾತ್ರ ಇಂದಿರಾ ಮಾತಿನಂತೆ ಕಾಂಗ್ರೆಸ್ಸಿನ ಉಸಿರಾಗಿದ್ದಾರೆ. ರಾಜೀವ ಗಾಂಧಿ ದುರಂತ ಅಂತ್ಯದ ನಂತರ ಕಾಂಗ್ರೆಸ್‌ ಪಕ್ಷವನ್ನು ಸ್ವತಃ ಸೋನಿಯಾ ಗಾಂಧಿ ಮುನ್ನಡೆಸುವ ಅನಿವಾರ್ಯ ಒದಗಿತು. ಈ ವೇಳೆ ಸೋನಿಯಾ ಗಾಂಧಿಯನ್ನು ಕೈಹಿಡಿದು ರಾಜಕೀಯದ ಆಳ-ಅಗಲ ತೋರಿಸಿದವರ ಪೈಕಿ ಪೂಜಾರಿ ಸಹ ಒಬ್ಬರು. ಆದ್ದರಿಂದ ಗಾಂಧಿ ಕುಟುಂಬವು ಪೂಜಾರಿ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಪೂಜಾರಿ ಮೇಲಿನ ಪ್ರೀತಿಯಿಂದ ಚುನಾವಣಾ ಪ್ರಚಾರ ಸಂದರ್ಭ ಸ್ವತಃ ಸೋನಿಯಾ ಗಾಂಧಿ ರಾಹುಲ್‌ ಗಾಂಧಿ ಮಂಗಳೂರಿಗೆ ಆಗಮಿಸಿ ಪೂಜಾರಿ ಪರ ಪ್ರಚಾರ ನಡೆಸುತ್ತಿದ್ದರು. ಇತ್ತೀಚೆಗೆ ರಾಹುಲ್‌  ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ ಭೇಟಿಯ ವೇಳೆ ಮೊಮ್ಮಗನ ರೀತಿಯಲ್ಲಿ ರಾಹುಲ್‌ ಗಾಂಧಿ ಕೈ ಹಿಡಿದು ಮುನ್ನಡೆಸಿದಾಗ ಪೂಜಾರಿ  ಭಾವೋದ್ವೇಗಕ್ಕೆ ಒಳಗಾಗಿದ್ದರು.

ಕುದ್ರೋಳಿ ದೇವಾಲಯ ಮತ್ತು ಮಂಗಳೂರು ದಸರಾದ ರೂವಾರಿ

ಜನಾರ್ದನ ಪೂಜಾರಿ ಕೇಂದ್ರ ಸಚಿವರಾಗಿದ್ದ ಸಂದರ್ಭ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಅಭಿವೃದ್ದಿ ಕಾರ್ಯಕ್ಕಾಗಿ ಮುಂಬೈ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಇದರಿಂದ ಬಂದ ದೇಣಿಗೆಯಿಂದ ದೇವಾಲಯದ ಜೀರ್ಣೋದ್ದಾರ ನಡೆಸಿದರು. 1991ರಲ್ಲಿ ರಾಜೀವ್‌ ಗಾಂಧಿ ನವೀಕೃತ ದೇವಾಲಯದ ಉದ್ಘಾಟಿದರು. ಜೊತೆಗೆ ದೇಶದಲ್ಲೆ ಮೊದಲ ಬಾರಿ ಒಂದೇ ಕಡೆ ನವದುರ್ಗೆಯರನ್ನು ಪೂಜಿಸಿ ಅದಕ್ಕೆ ‘ಮಂಗಳೂರು ದಸರಾ’ ಎಂದು ಹೆಸರು ಇಟ್ಟರು. ಅದಲ್ಲದೆ ಏಷ್ಯಾದ ಅತೀ ಉದ್ದನೆಯ(9.ಕೀ.ಮೀ) ವಿದ್ಯುತ್‌ ದೀಪಾಲಂಕೃತ ರಸ್ತೆಯಲ್ಲಿ ಸಾಂಸ್ಕೃತಿಕ ಸ್ಥಬ್ದಚಿತ್ರ ಮೆರವಣಿಗೆ ನಡೆಸಿದ ಕೀರ್ತಿ ಪೂಜಾರಿಗೆ ಸಲ್ಲುತ್ತದೆ. ಈಗಲೂ ಕೂಡ ಆ ಹಬ್ಬ ವಿಜೃಂಭಣೆಯಿಂದ ನಡೆಯುತ್ತಿದೆ.

ಇದೇ ದೇವಾಲಯಕ್ಕೆ ವಿಧವೆಯರಿಂದ ಚಂಡಿಕಾ ಹೋಮ ಮಾಡಿಸಿ, ಅವರ ಕೈಗೆ ಬಳೆ ತೊಡಿಸಿ, ಹಣೆಗೆ ಕುಂಕುಮ ಇರಿಸಿ ಹೊಸ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು. ಅದಾದ ನಂತರ ಪರಿಶಿಷ್ಟ ಜಾತಿಗೆ ಸೇರಿದ ವಿಧವೆ ಶಿಕ್ಷಕಿನ್ನು ಕರೆಸಿ ಅವರ ಪಾದಪೂಜೆ ಮಾಡಿ ಶಿವನಿಗೆ ಆರತಿ ಬೆಳಗಿಸಿ, ಅವರನ್ನೇ ಅರ್ಚಕಿಯನ್ನಾಗಿ ನೇಮಕ ಮಾಡಿದರು.

ಬಿಳಿ ಬಣ್ಣದ ಅಂಬಾಸಿಡರ್ ಕಾರು ಮತ್ತು ಪೂಜಾರಿ ನಂಟು

ಬಿಳಿ ಬಣ್ಣದ ಅಂಬಾಸಿಡರ್‌ ಕಾರಿನೊಂದಿಗೆ ಜನಾರ್ಧನ ಪೂಜಾರಿ ಅದೇನೋ ವ್ಯಾಮೋಹ. ಅವರಿಗೆ ಈ ಕಾರು ಬ್ರಾಂಡ್‌ ಮಾರ್ಕ್‌. ತನ್ನ ರಾಜಕೀಯ ಚಟುವಟಿಕೆಯ ಸಭೆ, ಸಮಾರಂಭ, ಪತ್ರಿಕಾಗೋಷ್ಠಿಗಳಿಗೆ ಇದೇ ಕಾರು ಬಳಸುತ್ತಿದ್ದರು. ಹಳೆಯ ಅಂಬಾಸಿಡರ್‌ ಕಾರನ್ನು ಬದಲಾಯಿಸುವ ಸಂದರ್ಭ ಅಂಬಾಸಿಡರ್‌ ಕಾರು ತಯಾರಕ ಹಿಂದೂಸ್ತಾನ್‌ ಮೋಟರ್ಸ್ ಅಂಬಾಸಿಡರ್‌ ಕಾರು ಉತ್ಪಾದನೆ ನಿಲ್ಲಿಸಿತ್ತು. ಮಂಗಳೂರಿನಲ್ಲೂ  ಅಂಬಾಸಿಡರ್‌ ಕಾರಿನ ಡೀಲರ್‌ ಮುಚ್ಚಲ್ಪಟ್ಟಿತ್ತು. ಈ ವೇಳೆ ಪೂಜಾರಿ ಸ್ವತಃ ಕೋಲ್ಕತ್ತಾದಲ್ಲಿರುವ ಹಿಂದೂಸ್ತಾನ್‌ ಮೋಟರ್ಸ್‌ ಕಂಪೆನಿಯನ್ನು ಸಂಪರ್ಕಿಸಿ ಮಂಗಳೂರಿಗೆ ಹೊಚ್ಚ ಹೊಸ  ಅಂಬಾಸಿಡರ್‌ ಕಾರು ತರಿಸಿಕೊಂಡರು. ಸದ್ಯ ಅವರು ಅನಾರೋಗ್ಯದಿಂದ ಓಡಾಡಲು ಕಷ್ಟಪಡುತ್ತಿದ್ದಾರೆ. ಆದರೂ ಈಗಲೂ ಈ ಕಾರು ಸುಸ್ಥಿತಿಯಲ್ಲಿದೆ ಎಂದರೂ ನೀವು ನಂಬಲೇಬೇಕು.

ಪತ್ರಿಕಾಗೋಷ್ಠಿಯಲ್ಲಿ ಏನು ಹೇಳುತ್ತಾರೆಂಬ ಕುತೂಹಲವಿತ್ತು

ಯಾವುದೇ ಚೀಟಿ, ಪುಸ್ತಕ ಇಲ್ಲದೇ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದುದು ವಿಶೇಷ. ಉಳಿದ ರಾಜಕಾರಣಿಗಳು ಖಾಸಗಿ ಹೊಟೇಲ್‌, ರೆಸಾರ್ಟ್, ಮನೆ ಹೀಗೆ ಹಲವು ಕಡೆ ಪತ್ರಿಕಾಗೋಷ್ಠಿ ನಡೆಸಿದರೆ ಅವರು ಮಾತ್ರ ಮಂಗಳೂರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಕಾರಣ ಅದಕ್ಕೂ ಅವರಿಗೂ ಒಂದು ಅವಿನಾಭಾವ ಸಂಬಂಧವಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಸ್ವಂತ ಕಟ್ಟಡ ಇಲ್ಲದ ವೇಳೆ ಪತ್ರಿಕಾಗೋಷ್ಠಿ ನಡೆಸಲು ಪತ್ರಕರ್ತರಿಗಾಗಿ ಪತ್ರಿಕಾ ಭವನ ನಿರ್ಮಾಣಕ್ಕೆ ತಮ್ಮ ಸಂಸತ್‌ ನಿಧಿಯಿಂದ 25 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಪತ್ರಿಕಾ ಭವನಕ್ಕೆ ಅಷ್ಟು ದೊಡ್ಡ ಮೊತ್ತ ನೀಡಿದರೂ ತಾವು ನಡೆಸುವ ಪತ್ರಿಕಾಗೋಷ್ಠಿಯ ವೆಚ್ಚವನ್ನು ಪ್ರೆಸ್‌ಕ್ಲಬ್‌ಗೆ ನೀಡುತ್ತಿದ್ದುದು ವಿಶೇಷ.   ಅವರು ಪತ್ರಿಕಾಗೋಷ್ಠಿಗೆ ನಡೆಸುವ ವೇಳೆ ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆಂಬ ಕುತೂಹಲ ಪ್ರತಿಯೊಬ್ಬ ಪತ್ರಕರ್ತರಲ್ಲಿರುತಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕರೆ ಮಾಡಿದ ಮರುದಿನ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ who is this poojary?(ಹೂ ಈಸ್‌ ದೀಸ್‌ ಪೂಜಾರಿ) ಎಂಬ ತಲೆಬರಹಕ್ಕೆ ‘that is poojary’ಎಂದು ತನ್ನ ಕೆಲಸ, ನೇರನುಡಿ, ಪ್ರಾಮಾಣಿಕತೆಯ ಮೂಲಕವೇ ಉತ್ತರ ನೀಡಿದ್ದಾರೆ.

ಪೂಜಾರಿಗೆ ಹಾರ ತುರಾಯಿ ಅಲರ್ಜಿ

ಮೊದಲಿನಿಂದಲೂ ಪೂಜಾರಿ ಅವರಿಗೆ ಸನ್ಮಾನ, ಹಾರ, ತುರಾಯಿ ಎಂದರೆ ಅಲರ್ಜಿ. ಈಗಲೂ ಅವರಿಗೆ ಸನ್ಮಾನ ಮಾಡುತ್ತೇವೆ ಎಂದು ಮುಂಚಿತವಾಗಿ ತಿಳಿಸಿದರೆ ತಿರಸ್ಕರಿಸುವುದು ಖಂಡಿತ. ಅವರನ್ನು ಗೌರವಿಸುವುದು ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಗೌರವ. ಆದ್ದರಿಂದ ಹಿರಿಯ ನಾಯಕರು ಅವರನ್ನು ಮನವೊಲಿಸಿ ಅವರ ಉಪಸ್ಥಿತಿಯ ಜೊತೆಗೆ ಹೆಸರಿನಲ್ಲಿ ಸೇವಾ ಕಾರ್ಯ ಮಾಡುವುದು ಧರ್ಮ.

ಪೂಜಾರಿಯ ಮಹಾಗೌರವಕ್ಕಾಗಿ ನಡೆಯಬೇಕು ಅಭಿಯಾನ

ಅವರುಡುವ ಶ್ವೇತ ವರ್ಣದ ವಸ್ತ್ರದಂತೆ ನಿಶ್ಕಲ್ಮಶ, ಪ್ರಾಮಾಣಿಕ ರಾಜಕಾರಣಿ ಸಿಗುವುದು ಬಲು ಅಪರೂಪ. ಆದ್ದರಿಂದ ಅವರು ಕರಾವಳಿ, ರಾಜ್ಯ, ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಅವರಿಗೆ ಪಕ್ಷಾತೀತವಾಗಿ ಗೌರವ ನೀಡಬೇಕು ಎಂಬುವುದು ಎಲ್ಲರ ಆಶಯ. ಈ ಕಾರ್ಯಕ್ರಮವನ್ನು ಬಿಲ್ಲವ ನಾಯಕರು ಹಾಗೂ ಸರ್ವ ಪಕ್ಷದ ನಾಯಕರು ಮಂಗಳೂರಿನ ಪುರಭವನ ಅಥವಾ ನೆಹರೂ ಮೈದಾನದಲ್ಲಿ ನಡೆಸಬೇಕು. ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಪಕ್ಷದ ಹಿರಿಯ ನಾಯಕರನ್ನು ಕರೆದರೆ ಆ ಕಾರ್ಯಕ್ರಮಕ್ಕೆ ವಿಶಿಷ್ಟ ಕಳೆ ಬರುವುದು ಖಂಡಿತ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಎಲ್ಲಾ ನಾಯಕರು ಧೃಡ ಸಂಕಲ್ಪದಿಂದ ಮುನ್ನಡೆಯುವ ಅಗತ್ಯವಿದೆ.

LEAVE A REPLY

Please enter your comment!
Please enter your name here

Hot Topics

ಶಾಲೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದ 7 ರ ಬಾಲಕಿ ಕಾಲುಸಂಕದಿಂದ ಬಿದ್ದು ನಾಪತ್ತೆ..!

ಉಡುಪಿ: ಶಾಲೆ ಬಿಟ್ಟು ವಾಪಾಸಾಗುತ್ತಿದ್ದ 7ರ ಪ್ರಾಯದ ಬಾಲಕಿ ಮರದ ಕಾಲು ಸಂಕ ದಾಟುತ್ತಿದ್ದಾಗ ಹೊಳೆಗೆ ಜಾರಿ ಬಿದ್ದು ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ನಡೆದಿದೆ.ಸನ್ನಿಧಿ...

ಕುಟುಂಬ ಕಲಹದಿಂದ ಬೇಸತ್ತು ಊರು ತೊರೆಯುತ್ತಿದ್ದ ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸಿದ ವಿಶು ಶೆಟ್ಟಿ ಅಂಬಲಪಾಡಿ

ಉಡುಪಿ: ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ಎರಡು ಪುಟ್ಟ ಮಕ್ಕಳೊಂದಿಗೆ ರೈಲು ಮುಖಾಂತರ ಎಲ್ಲಿಯಾದರೂ ಹೊರಟು ಹೋಗುತ್ತೇನೆ ಎಂದ ಮಹಿಳೆಯನ್ನು ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಯ ರಕ್ಷಿಸಿ "ಸಖಿ" ಸೆಂಟರಿಗೆ...

ಮಂಗಳೂರು: ವ್ಯಕ್ತಿ ರಿಕ್ಷಾದಲ್ಲಿ ಬಿಟ್ಟು ಹೋದ ದುಬಾರಿ ವಸ್ತುಗಳನ್ನು ಹಿಂತಿರುಗಿಸಿದ ಚಾಲಕ-ಎಲ್ಲೆಡೆ ಪ್ರಶಂಸೆ

ಮಂಗಳೂರು: ವ್ಯಕ್ತಿಯೊಬ್ಬರು ಪ್ರಯಾಣಿಸಿದ್ದ ರಿಕ್ಷಾದಲ್ಲಿ ಬಿಟ್ಟುಹೋಗಿದ್ದ ಮೌಲ್ಯಯುತ ವಸ್ತುಗಳನ್ನು ಆಟೋ ಚಾಲಕ ವಾಪಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಿನ್ನೆ ನಡೆದಿದೆ.ಎಗ್ ಬರ್ಟ್ ಪಿರೇರಾ ಎಂಬವರು ಬಿಜೈ ಕ್ರಾಸ್ ರೋಡ್...