ಮಂಗಳೂರು: ಮುಖ್ಯಮಂತ್ರಿ ಭೇಟಿಯ ಬೆನ್ನಲ್ಲೇ ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಹತ್ಯೆಗೆ ನೇರ ಹೊಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಭೇಟಿಯ ಸಂದರ್ಭ ತೋರಿದ ಸಾರ್ವಜನಿಕ ಹೊಣೆಗೇಡಿತನವೇ ಹಂತಕರಿಗೆ ಧೈರ್ಯ ನೀಡಿದೆ ಎಂದು ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಇವರು ‘ಜಿಲ್ಲೆಯಲ್ಲಿ ನಡೆಯುತ್ತಿರುವ ಅಮಾಯಕರ ಸರಣಿ ಕೊಲೆಗಳಿಗೆ ಬೊಮ್ಮಾಯಿ ಸರ್ಕಾರವೇ ಕಾರಣ.
ಕೋಮುವಾದಿ ಆಡಳಿತದ ಕರ್ನಾಟಕ ಮಾದರಿಯೊಂದನ್ನು ಬೊಮ್ಮಾಯಿ ನಿರ್ಮಿಸಿ ಬಿಟ್ಟರು. ಅವರು ಇನ್ನು ಮುಂದೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬಾರದು. ರಾಜಿನಾಮೆ ಕೊಟ್ಟು ನಿರ್ಗಮಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಲಪೇಟೆಯಲ್ಲಿ ನಡೆದ ಅಮಾನುಷ ಕೊಲೆಯನ್ನು ಖಂಡಿಸಿದ್ದಾರೆ. ಈ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ.
ದುಷ್ಕೃತ್ಯ ನಡೆಸಿದವರನ್ನು ಬಂಧಿಸಿ, ಕಾನೂನಿನ ಕ್ರಮ ಜರುಗಿಸಲು, ಪೊಲೀಸರು ಪೂರ್ಣ ಸ್ವಾತಂತ್ರ್ಯ ಹೊಂದಿದ್ದು, ಜನತೆ ಶಾಂತಿಯಿಂದ ಸಹಕರಿಸಬೇಕು ಎಂದು ತಿಳಿಸಿದ್ದಾರೆ.