ಮಂಗಳೂರು: ಮಹಾನಗರ ಪಾಲಿಕೆಯ ಬೆಂಗ್ರೆ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ತೋಟ ಬೆಂಗ್ರೆಯ ಪ್ಯಾಸೆಂಜರ್ ಬೋಟ್ ಜೆಟ್ಟಿಯ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಕಾಮತ್, ಪ್ಯಾಸೆಂಜರ್ ಬೋಟ್ ಜೆಟ್ಟಿ ಬಳಿಯ ರಸ್ತೆ ನಿರ್ಮಾಣಕ್ಕಾಗಿ 10 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬೆಂಗ್ರೆ ಪರಿಸರದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಕೆ, ಆರೋಗ್ಯ ಕೇಂದ್ರ ಸ್ಥಾಪನೆ, ಅಂಗನವಾಡಿ ಕೇಂದ್ರ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದೆ.
ಈ ಭಾಗದ ಜನರ ಬೇಡಿಕೆಗಳ ಪ್ರಕಾರ ಮತ್ತಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ಸುನಿತಾ, ಸ್ಥಳೀಯ ಮುಖಂಡರಾದ ಗಂಗಾಧರ್ ಸಾಲ್ಯಾನ್, ಹೇಮಚಂದ್ರ ಸಾಲ್ಯಾನ್, ಲೋಕೇಶ್ ಬೆಂಗ್ರೆ, ಕೇಶವ ಗುರಿಕಾರ, ಶಶಿಕುಮಾರ್, ಸಲೀಂ ಕಸಬಾ, ಮೋಹನ್ ಬೆಂಗ್ರೆ, ಲತೀಶ್ ಪುತ್ರನ್, ಸಂಜಯ್ ಸುವರ್ಣ, ಮಹೇಶ್ ವಿ.ಕೆ, ಸುಂದರ್ ಸಾಲ್ಯಾನ್, ಸ್ಥಳೀಯರು, ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.