BELTHANGADY
ಬೆಳ್ತಂಗಡಿ: ಹಟ್ಟಿಗೆ ನುಗ್ಗಿ ದನ ಕೊಂದು ತಿಂದ ಚಿರತೆ
ಬೆಳ್ತಂಗಡಿ: ದನದ ಹಟ್ಟಿಗೆ ನುಗ್ಗಿದ ಚಿರತೆ ಕಟ್ಟಿ ಹಾಕಿದ್ದ ದನವೊಂದನ್ನು ಕೊಂದು ತಿಂದ ಘಟನೆ ಧರ್ಮಸ್ಥಳ ಗ್ರಾಮದ ನೇರ್ತನೆ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿಯಾಗಿರುವ ತ್ರೇಸ್ಯಾಮ್ಮ ಪಿ.ಕೆ. ಎಂಬವರಿಗೆ ಸೇರಿದ ದನ ಇದಾಗಿದ್ದು,. ತ್ರೇಸ್ಯಾಮ್ಮರ ಮನೆಯ ಸಮೀಪದ ಹಟ್ಟಿಯಲ್ಲಿದ್ದ ದನವನ್ನು ರಾತ್ರಿಯ ವೇಳೆ ಚಿರತೆ ಕೊಂದು ತಿಂದಿದೆ.
ತ್ರೇಸ್ಯಾಮ್ಮ ಅವರ ಮನೆ ಅರಣ್ಯದ ಸಮೀಪವೇ ಇದೆ. ಆಶಾ ಕಾರ್ಯಕರ್ತೆಯಾಗಿರುವ ಇವರು ಅತಿಸಣ್ಣ ಕೃಷಿಕರು ಆಗಿದ್ದು, ಹೈನುಗಾರಿಯೇ ಇವರಿಗೆ ಜೀವನೋಪಾಯವಾಗಿದೆ.
ನೇರ್ತನೆಯಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಆನೆಗಳ ಹಾವಳಿ ತುಂಬಾ ಹೆಚ್ಚಾಗಿದೆ. ಕೃಷಿಕರು ಆತಂಕದಲ್ಲಿಯೇ ಬದುಕಬೇಕಾದ ಸ್ಥಿತಿ ಎದುರಾಗಿದೆ ಎಂದು ಇಲ್ಲಿನ ಜನರು ಮಾಹಿತಿ ನೀಡಿದ್ದಾರೆ. ಮುಂಡಾಜೆ ದುಂಬೆಟ್ಟು ಪರಿಸರದಲ್ಲಿ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊಡು ನಾಯಿಗಳನ್ನು ತಿಂದು ಹಾಕಿತ್ತು.
ಆ ಪರಿಸರದಿಂದ ಚಿರತೆ ಇಲ್ಲಿಗೆ ಬಂದಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಕಾಡುಪ್ರಾಣಿಗಳ ಉಪಟಳದಿಂದಾಗಿ ಸ್ಥಳೀಯ ಜನರು ರಾತ್ರಿ ಹಾಗೂ ಬೆಳಗ್ಗಿನ ಜಾವ ಮನೆಗಳಿಂದ ಹೊರ ಬರಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.
BELTHANGADY
Belthangady: ಕಾರಿನ ಮೇಲೆ ಕಾಡಾನೆ ದಾಳಿ- 6 ಮಂದಿಗೆ ಗಾಯ..!
ಬೆಳ್ತಂಗಡಿ: ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿ ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಎಂಬಲ್ಲಿ ನಡೆದಿದ್ದು, ಅಲ್ಟೋ ಕಾರಿನ ಮೇಲೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಆರು ಮಂದಿಗೆ ಗಾಯವಾಗಿದೆ.
ಈ ಘಟನೆ ನೆರಿಯಾದ ಪೋಸ್ಟ್ ಆಫೀಸ್ ಬಳಿ ನಡೆದಿದೆ. ನೆರಿಯಾ ಗ್ರಾಮ ಕಾಡಿನ ಅಂಚಿನಲ್ಲಿರೋ ಕಾರಣ ಕಾಡಾನೆ ಆತಂಕ ಹೆಚ್ಚಾಗಿದೆ. ಕಾಡಾನೆ ದಾಳಿಯಿಂದ ಕಾರಿಗೆ ಹಾನಿಯಾಗಿದ್ದು, ಗಾಯಗೊಂಡವರಿಗೆ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
BELTHANGADY
Belthangady: ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು ಕಳವು- ನಾಲ್ವರು ಅರೆಸ್ಟ್..!
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಕಳ್ಳತನ ಮಾಡಿದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಿನ್ನಿಗೋಳಿಯ ತಾಳಿಪಾಡಿ ಗ್ರಾಮದ ಉಮಾ ಅಜಯ್ ಶೆಟ್ಟಿ(32), ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಗಾಣದಬೆಟ್ಟು ನಿವಾಸಿ ಸೂರಜ್ ಶೆಟ್ಟಿ(23), ಇಳಂತಿಲ ಗ್ರಾಮದ ಎನ್ಮಾಡಿ ನಿವಾಸಿ ಮಂಜುನಾಥ ಪೂಜಾರಿ (30) ಮತ್ತು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಪರೆಕಲ್ ನಿವಾಸಿ ಕಿಶೋರ್ ಟಿ.(32) ಬಂಧಿತ ಆರೋಪಿಗಳು.
ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ನ. 9 ರಂದು ರಾತ್ರಿ 10 ಗಂಟೆ ವೇಳೆಗೆ ಇಸಾಕ್ ಅವರ ಅಕ್ಕನ ಮಗ ನೌಫಾಲ್ ತನ್ನ ಕಾರ್‌ಶೆಡ್ಡಿನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಗೆಳೆಯ ಸೈಫುದ್ದಿನ್‌ನ ಸ್ನೇಹಿತ ಸೂರಜ್ ಶೆಟ್ಟಿ ಮತ್ತು ಅಜಯ್ ಶೆಟ್ಟಿ ಅವರು ಬಾಡಿಗೆಗೆ ನೀಡುವಂತೆ ಕೇಳಿದ್ದರು. ಆದರೆ ಕಾರನ್ನು ನೀಡದ ಕಾರಣ ಅವರೇ ಕಳವು ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ಡಿ. ಮತ್ತು ಸಬ್ ಇನ್‌ಸ್ಪೆಕ್ಟರ್ ಸಮರ್ಥ ರವೀಂದ್ರ ಗಾಣಿಗೇರ, ಎಎಸ್‌ಐಗಳಾದ ಸಾಮ್ಯುವೆಲ್ ಮತ್ತು ಪೌಲೋಸ್ ಹಾಗೂ ಸಿಬಂದಿ ರಾಜೇಶ್ ಎನ್., ಪ್ರಶಾಂತ್, ಮಂಜುನಾಥ್, ಮಲ್ಲಿಕಾರ್ಜುನ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
BELTHANGADY
ಜನ್ಮ ದಿನಾಚರಣೆಯ ಸಂಭ್ರಮದಲ್ಲಿ ಧರ್ಮಸ್ಥಳದ ಖಾವಂದರು
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು 76ನೇ ವರ್ಷಕ್ಕೆ ನ. 25ರಂದು ಪಾದಾರ್ಪಣೆ ಮಾಡುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ವೀರೇಂದ್ರ ಹೆಗ್ಗಡೆ ಅವರಿಗೆ ವಿವಿಧ ಕ್ಷೇತ್ರಗಳ ಗಣ್ಯರು ಶುಭಾಶಯ ಕೋರಿದ್ದಾರೆ. 1948ರ ನವೆಂಬರ್ 25ರಂದು ಜನಿಸಿದ್ದ ಹೆಗ್ಗಡೆ ಅವರು 1964ರ ಅ. 24ರಂದು ಕ್ಷೇತ್ರದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗಿದ್ದರು. ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವ ಉದ್ಯೋಗ ತರಬೇತಿ ಕೇಂದ್ರಗಳು, ಸಿರಿ ಸಂಸ್ಥೆಗಳು, ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ವಿದ್ಯಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಉಜಿರೆ ಸೇರಿದಂತೆ ಮಂಗಳೂರು, ಮೈಸೂರು, ಧಾರವಾಡ, ಬೆಂಗಳೂರು, ಉಡುಪಿ ಮೊದಲಾದ ಕಡೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ನಡೆಸುತ್ತಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ನೌಕರರು, ಊರಿನ ನಾಗರಿಕರು, ಕ್ಷೇತ್ರದ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ಸಂಸ್ಥೆಗಳ ಸಿಬಂದಿಯಿಂದ ವಿಶೇಷ ಗೌರವ ಸಲ್ಲಿಸಿದ್ದಾರೆ.