DAKSHINA KANNADA
ಅಸ್ಸಾಂ ಮುಖ್ಯಮಂತ್ರಿಗಳಿಂದ ತುಳು ಭಾಷೆ ಸ್ಥಾನಮಾನಕ್ಕೆ ಹಾರೈಕೆ..!
ಜೈ ತುಲುನಾಡ್(ರಿ.) ಸಂಘಟನೆಯು ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ ‘ತುಲುಪುರ್ಪ’ ಕವನ ಸಂಕಲನ ಕೃತಿಯನ್ನು ಶ್ಲಾಘಿಸಿ ಅಸ್ಸಾಂ ಮಾನ್ಯ ಮುಖ್ಯಮಂತ್ರಿ ಡಿ.ಹಿಮಂತ ಬಿಸ್ವಾ ಶರ್ಮಾರವರು ಸಂಘಟನೆಯ ಅಧ್ಯಕ್ಷರಿಗೆ ಪತ್ರವನ್ನು ಬರೆದಿದ್ದಾರೆ.
ಮಂಗಳೂರು: ಜೈ ತುಲುನಾಡ್(ರಿ.) ಸಂಘಟನೆಯು ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ ‘ತುಲುಪುರ್ಪ’ ಕವನ ಸಂಕಲನ ಕೃತಿಯನ್ನು ಶ್ಲಾಘಿಸಿ ಅಸ್ಸಾಂ ಮಾನ್ಯ ಮುಖ್ಯಮಂತ್ರಿ ಡಿ.ಹಿಮಂತ ಬಿಸ್ವಾ ಶರ್ಮಾರವರು ಸಂಘಟನೆಯ ಅಧ್ಯಕ್ಷರಿಗೆ ಪತ್ರವನ್ನು ಬರೆದಿದ್ದಾರೆ.
ದೇಶದಾದ್ಯಂತ ತುಳು ಭಾಷೆಯನ್ನು ಪರಿಚಯಿಸುವ ಹಾಗೂ ಭಾಷೆಗೆ ಮಾನ್ಯತೆಯನ್ನು ದೊರಕಿಸಿಕೊಡುವಲ್ಲಿ ಈ ಕೃತಿಯನ್ನು ಪ್ರಧಾನಿಯವರಿಗೆ, ರಾಷ್ಟ್ರಪತಿಗಳಿಗೆ ಹಾಗೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾಗಿದ್ದು, ಇದೀಗ ಕೃತಿ ಸ್ವೀಕರಿಸಿದ ಅಸ್ಸಾಂ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಂದ ಪ್ರತಿಕ್ರಿಯೆಯು ಬಂದಿರುವುದು ಸಂತಸವನ್ನು ತಂದಿದೆ.
ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಹಲವು ಭಾಷೆಗಳಿವೆ. ಪಂಚ ಮಹಾದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಯೂ ಒಂದು.
ನಮ್ಮ ಐಕ್ಯತೆಯನ್ನು ಸಧೃಡಗೊಳಿಸುವಲ್ಲಿ ಭಾಷೆಗಳು ಆಧಾರ ಸ್ತಂಭಗಳಾಗಿವೆ. ತುಳು ಭಾಷೆಗೆ ಮಾನ್ಯತೆ ದೊರೆಯಬೇಕು.
ಈ ನಿಟ್ಟಿನಲ್ಲಿ ಜೈ ತುಲುನಾಡ್ (ರಿ)ನ ಕಾರ್ಯ ಶ್ಲಾಘನೀಯವೆಂದು ಪ್ರತಿಕ್ರಿಯಿಸಿದ್ದಾರೆ ಎಂದು ಸಂಘಟನೆಯು ತಿಳಿಸಿರುತ್ತದೆ.
ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರುಗಳ ಆಶೀರ್ವಚನದ ನುಡಿಯೊಂದಿಗೆ, ಈ ಕೃತಿಗೆ ತುಲುನಾಡಿನ ಅಲುಪ ವಂಶಸ್ಥ ಡಾ.ಆಕಾಶ್ ರಾಜ್ ಜೈನ್. ಮಾಜಿ ಸದಸ್ಯರು ಕರ್ನಾಟಕ ತುಲು ಸಾಹಿತ್ಯ ಅಕಾಡೆಮಿ. ಇವರು ಮುನ್ನುಡಿ ಬರೆದಿದ್ದಾರೆ.
ಬೆನ್ನುಡಿಯನ್ನು ಇನ್ನೊಬ್ಬ ಜನಮೆಚ್ಚಿದ ಧರ್ಮದರ್ಶಿಗಳಾದ ಶ್ರೀ ಹರಿಕೃಷ್ಣ ಪುನರೂರು ಬರೆದಿದ್ದಾರೆ.
ಈ ಕೃತಿಯಲ್ಲಿ ಇಂಗ್ಲಿಷ್, ಹಿಂದಿ, ಕನ್ನಡ,ತುಲು ಭಾಷೆಗಳಲ್ಲಿ ಮುದ್ರಣಗೊಂಡಿದ್ದು, ಕೃತಿಯ ತಿರುಳನ್ನು ದೇಶದಾದ್ಯಂತ ಎಲ್ಲರಿಗೂ ತಿಳಿದುಕೊಳ್ಳಲು ಸಹಕಾರಿಯಾಗುವಂತೆ ಮುದ್ರಿಸಿರುವುದು ಇದರ ವಿಶೇಷತೆಯಾಗಿದೆ.
ತುಲು ಪುರ್ಪದ ಕೆಲಸವನ್ನು ಶ್ಲಾಘಿಸಿರುವ ಅಸ್ಸಾಂ ಮುಖ್ಯಮಂತ್ರಿಗಳಿಗೆ ಜೈ ತುಲುನಾಡ್ (ರಿ.) ಸಂಘಟನೆಯು ಕೃತಜ್ಞತೆಯನ್ನು ಸಲ್ಲಿಸಿದೆ.
ತುಲು ಪುರ್ಪ ಕೃತಿಯ ಸಂಪಾದಕೀಯ ಬಳಗದಲ್ಲಿ ಸಂಘಟನೆಯ 2022-23ನೇ ಸಾಲಿನ ಸಮಿತಿಯ ಅಧ್ಯಕ್ಷರಾದ ಶ್ರೀ ಅಶ್ವಥ್ ತುಲುವೆ, ಪ್ರಧಾನ ಕಾರ್ಯದರ್ಶಿ ಶ್ರೀ ಅವಿನಾಶ್ ಮುಕ್ಕ,2022 -23 ನೇ ಸಾಲಿನ ತುಲು ಸಾಹಿತ್ಯ ಸಮಿತಿಯ ಮೇಲ್ವಿಚಾರಕರಾದ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ, ಸಹ ಮೇಲ್ವಿಚಾರಕರಾದ ಗೀತಾ ಲಕ್ಷ್ಮೀಶ್, ಸಂಘಟನಾ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಕಿರಣ್ ತುಲುವ, ನಿಶ್ಚಿತ್.ಜಿ ರಾಮಕುಂಜ, ಜಗದೀಶ್ ಗೌಡ ಕಲ್ಕಲ, ಯತೀಶ್ ಕುಮಾರ್, ಪ್ರಚಾರ ಸಮಿತಿಯ ಮೇಲ್ವಿಚಾರಕ ವಿನಯ್ ರೈ, ಸುಮಂತ್ ಹೆಬ್ರಿ, ಸಂಜನಾ ಪೂಜಾರಿ, ಪೃಥ್ವಿ ತುಲುವೆ,ರಂಜನ್ ಎಸ್ ವೈ .ಬೆಳ್ತಂಗಡಿ, ಶರತ್ ಕೊಡವೂರು, ಶಶಿಕಲಾ, ಪ್ರಜ್ಞಾ, ಪ್ರಹ್ಲಾದ್ ತಂತ್ರಿ ಹಾಗೂ ಇನ್ನಿತರರು ಈ ಕೃತಿಯನ್ನು ಬೆಳಕಿಗೆ ತರುವಲ್ಲಿ ಶ್ರಮಿಸಿರುತ್ತಾರೆ.
DAKSHINA KANNADA
ಜಾನುವಾರು ಸಾಗಾಟಗಾರರ ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರ ಬಂಧನ..!
ಮಂಗಳೂರು: ಜಾನುವಾರು ಅಕ್ರಮ ಸಾಗಾಟದ ತಂಡವೊಂದರ ಸದಸ್ಯರ ಕೊಲೆಗೆ ಸಂಚು ರೂಪಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್ ನಲ್ಲಿ ನಡೆದಿದೆ.
ಫರಂಗಿಪೇಟೆ ಸಮೀಪದ ಅಮೆಮಾರ್‌ನ ನಿವಾಸಿಗಳು ತಸ್ಲೀಮ್ ಯಾನೆ ಗರುಡ ತಸ್ಲೀಮ್ (34) ಮತ್ತು ಹೈದರಾಲಿ ಯಾನೆ ಹೈದು (26) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಗುರುವಾರದಂದು ತಸ್ಲೀಮ್ ಮತ್ತು ಆತನ ಗುಂಪಿನ ಸದಸ್ಯರು ಇನ್ನೊಂದು ತಂಡದ ಕೊಲೆಗೆ ಸಂಚು ರೂಪಿಸಿ ತಲವಾರಿನೊಂದಿಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಕೊಲೆ ಸಂಚನ್ನು ವಿಫಲಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ತಸ್ಲೀಮ್ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಹಾಗೂ ದರೋಡೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ, ಜಾನುವಾರು ಕಳ್ಳತನ ಪ್ರಕರಣ, ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣ ಗಳು, ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸಹಿತ 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಈತನು 10 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ.
ಇನ್ನೋರ್ವ ಆರೋಪಿ ಹೈದರಾಲಿಯು ಈ ಹಿಂದೆ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ, ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣ ಹಾಗೂ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
BANTWAL
ವಿಟ್ಲ: ವಿದ್ಯಾರ್ಥಿನಿಗೆ ಕಿರುಕುಳ-ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
ಬಂಟ್ವಾಳ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರದಲ್ಲಿ ಪೆರುವಾಯಿ ಮೂಲದ ಯುವಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬಳನ್ನು ಯುವಕ ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಶಾಲೆ ಸಮೀಪ ಬಂದು ಬೈಕ್ ನಲ್ಲಿ ಕೂರುವಂತೆ ಹೇಳಿದ್ದಾನೆ.
ಈ ಎಲ್ಲಾ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸುವ ಕಾರ್ಯ ಮಾಡಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದು, ಅವರು ಪೋಷಕರಿಗೆ ಮಾಹಿತಿ ನೀಡಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
DAKSHINA KANNADA
ಇಂದು ಕರ್ನಾಟಕ ಬಂದ್: ಕರಾವಳಿಗರಿಂದ ನೈತಿಕ ಬೆಂಬಲ-ಬಸ್, ಹೊಟೇಲ್, ಶಾಲೆಗಳು ಎಂದಿನಂತೆ
ಮಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಕರೆ ನೀಡಿರುವ ಇಂದಿನ (ಶುಕ್ರವಾರ) ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ನೈತಿಕ ಬೆಂಬಲ ವ್ಯಕ್ತವಾಗಿದೆ.
ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ.
ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ. ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗುವ ಕಾರಣ ನಾವು ನೈತಿಕ ಬೆಂಬಲ ಸೂಚಿಸುತ್ತೇವೆ. ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿದೆ.
ಜೊತೆಗೆ ಕರಾವಳಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಿದೆ. ಹೀಗಾಗಿ ಉಡುಪಿ- ಮಂಗಳೂರಿನಲ್ಲಿ ಹೋಟೆಲ್ ಗಳು ತೆರೆದಿರಲಿವೆ.
ಇಂದು ಕರ್ನಾಟಕ ಬಂದ್ ಇದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತೆ ಇರಲಿದೆ. ಜೊತೆಗೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.