ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಎಲ್ಲ ಘಟಕಗಳನ್ನು ಭಾನುವಾರ ವಿಸರ್ಜಿಸಿದ್ದಾರೆ. ಇದರಲ್ಲಿ ಯುವ ಘಟಕ ಮತ್ತು ಮಹಿಳಾ ಘಟಕಗಳು ಕೂಡ ಸೇರಿವೆ.
ತಮ್ಮ ಈ ದಿಢೀರ್ ನಿರ್ಧಾರಕ್ಕೆ ಅಖಿಲೇಶ್ ಯಾದವ್ ಯಾವುದೇ ಅಧಿಕೃತ ಕಾರಣ ನೀಡಿಲ್ಲ. ಆದರೆ ವಾರದ ಹಿಂದೆ ನಡೆದ ರಾಮಪುರ ಹಾಗೂ ಅಜಂಗಡಗಳಲ್ಲಿನ
ಪಕ್ಷದ ಭದ್ರ ಕೋಟೆಗಳಲ್ಲಿ ಲೋಕಸಭಾ ಉಪ ಚುನಾವಣೆಗಳಲ್ಲಿನ ಆಘಾತಕಾರಿ ಸೋಲಿನ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷವನ್ನು ಸಂಪೂರ್ಣ ಪುನರುಜ್ಜೀವನಗೊಳಿಸುವ ಪ್ರಯತ್ನ ಇದು ಎಂದು ಹೇಳಲಾಗಿದೆ.
ಅಖಿಲೇಶ್ ಯಾದವ್ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನು ಹೊರತುಪಡಿಸಿ, ತಕ್ಷಣದಿಂದ ಜಾರಿಯಾಗುವಂತೆ ಯುವ ಮತ್ತು ಮಹಿಳಾ ಘಟಕಗಳು ಸೇರಿದಂತೆ ಪಕ್ಷದ ಎಲ್ಲ ಸಂಘಟನೆಗಳ ರಾಷ್ಟ್ರೀಯ ಅಧ್ಯಕ್ಷರು,
ರಾಜ್ಯ ಅಧ್ಯಕ್ಷರು ಮತ್ತು ಜಿಲ್ಲಾ ಮಟ್ಟದ ಎಲ್ಲ ಕಾರ್ಯಕಾರಿ ಸಂಘಟನೆಗಳ ಅಧ್ಯಕ್ಷರನ್ನು ವಜಾಗೊಳಿಸಿದ್ದಾರೆ” ಎಂದು ಪಕ್ಷದ ಟ್ವಿಟ್ಟರ್ ಖಾತೆ ತಿಳಿಸಿದೆ.