ಲಕ್ನೋ: ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರದ ಸ್ಥಳಕ್ಕೆ ಭೇಟಿ ನೀಡುವಾಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದು 56 ಗಂಟೆಯಾದರೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ವಾರೆಂಟ್ ತೋರಿಸದಿದ್ದರೆ ನನ್ನನ್ನು ನೀವು ಮುಟ್ಟುವಂತಿಲ್ಲ ಎಂದು ಪೊಲೀಸರಿಗೆ ಪ್ರಿಯಾಂಕಾ ಹೇಳಿದರೂ ಕೇಳದೆ ಅವರನ್ನು ಕರೆದುಕೊಂಡು ಹೋಗಿ ಗೆಸ್ಟ್ ಹೌಸ್ನಲ್ಲಿ ಗೃಹಬಂಧನದಲ್ಲಿರಿಸಲಾಗಿತ್ತು.
ಬಳಿಕ ನಿನ್ನೆ ಸಂಜೆ ಅವರನ್ನು ಅಧಿಕೃತವಾಗಿ ಬಂಧಿಸಲಾಗಿದೆ. 38 ಗಂಟೆಗಳಿಗೂ ಹೆಚ್ಚು ಕಾಲ ನನ್ನನ್ನು ಸೀತಾಪುರದ ಗೆಸ್ಟ್ ಹೌಸ್ನಲ್ಲಿ ಇರಿಸಿದ್ದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ.
ಸೆಕ್ಷನ್ 151ರ ಅಡಿಯಲ್ಲಿ ನನ್ನನ್ನು ಬಂಧಿಸುತ್ತಿರುವುದಾಗಿ ನನಗೆ ಪೊಲೀಸರು ಹೇಳಿದರು. ಆದರೆ, ಅವರು ಎಫ್ಐಆರ್ ಪ್ರತಿಯನ್ನು ನನಗೆ ತೋರಿಸಿಲ್ಲ ಎಂದು ನಿನ್ನೆ ರಾತ್ರಿ ಆರೋಪಿಸಿದ್ದಾರೆ.
ನನ್ನನ್ನು ವಶಕ್ಕೆ ಪಡೆದ ಬಳಿಕ ಮ್ಯಾಜಿಸ್ಟ್ರೇಟ್ ಮುಂದೆಯೂ ಹಾಜರುಪಡಿಸಿಲ್ಲ ಅಥವಾ ನ್ಯಾಯಾಂಗದ ಅಧಿಕಾರಿಗಳ ಎದುರೂ ಹಾಜರುಪಡಿಸಿಲ್ಲ. ಅಲ್ಲದೆ, ನನಗೆ ನನ್ನ ವಕೀಲರನ್ನು ಭೇಟಿಯಾಗಲು ಅವಕಾಶವನ್ನೂ ನೀಡಿಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಪ್ರಿಯಾಂಕಾ ಗಾಂಧಿಯನ್ನು ಸಿಆರ್‌ಪಿಸಿ ಸೆಕ್ಷನ್ 151 ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಸೆಕ್ಷನ್ 151ರ ಅಡಿಯಲ್ಲಿ ಬಂಧಿಸಿದ ಯಾವುದೇ ವ್ಯಕ್ತಿಯನ್ನು ನ್ಯಾಯಾಧೀಶರ ಆದೇಶವಿಲ್ಲದೆ 24 ಗಂಟೆಗಳಿಗಿಂತ ಹೆಚ್ಚು ಕಾಲ ಬಂಧಿಸುವಂತಿಲ್ಲ.
ಆದರೂ 50 ಗಂಟೆಗೂ ಹೆಚ್ಚು ಕಾಲ ಪ್ರಿಯಾಂಕಾ ಗಾಂಧಿ ಅವರನ್ನು ಬಂಧನದಲ್ಲಿ ಇರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿಕೆ ನೀಡಿದ್ದರು.