ಬೆಂಗಳೂರು : ಲೇಖಕ,ಮಾಜಿ ಸಚಿವ,ಪ್ರೊ. ಮಮ್ತಾಝ್ ಅಲಿ ಖಾನ್ (94) ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಗಂಗಾನಗರ ನಿವಾಸದಲ್ಲಿ ತಮ್ಮ ವಯೋಸಹಜ ಖಾಯಿಲೆಯಿಂದ ಮುಂಜಾನೆ ಮೃತಪಟ್ಟಿದ್ದಾರೆ.
ಮುಮ್ತಾಝ್ ಅಲಿ ಖಾನ್ ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 2008ರಲ್ಲಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.ಬೆಂಗಳೂರು ಕೃಷಿ ವಿವಿಯಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ ಸ್ವಯಂ ನಿವೃತ್ತಿ ಪಡೆದಿದ್ದ ಅವರು ಕಳೆದ ಸುಮಾರು 30 ವರ್ಷಗಳಿಂದ ಬೆಂಗಳೂರಿನ ಆರ್.ಟಿ ನಗರದಲ್ಲಿ ಮೃತ ಮಗ ನೂರ್ ಅಹ್ಮದ್ ಅಲಿ ಖಾನ್ ಹೆಸರಿನಲ್ಲಿ ಶಾಲೆ ನಡೆಸುತ್ತಿದ್ದರು.
ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ನಡೆಸುತ್ತಿದ್ದು, ಈ ಶಾಲೆಯಲ್ಲಿ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ, ಉಚಿತ ಮಧ್ಯಾಹ್ನ ಉಪಹಾರ, ಉಚಿತ ಪಠ್ಯಪುಸ್ತಕ, ಸಮವಸ್ತ್ರಗಳನ್ನು ಇವರಿಗೆ ಬರುವ ಪಿಂಚಣಿ ಮತ್ತು ಇತರೆ ಸ್ವಂತ ಮೂಲಗಳಿಂದ ಬಡಮಕ್ಕಳಿಗೆ ವಿತರಿಸುತಿದ್ದರು.
ಅವರ ಪತ್ನಿಯೇ ಅಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಖಾನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ವೈ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ನಾಯಕರು, ಸಾಹಿತ್ಯ ಲೋಕದ ಮಹನೀಯರು ಕಂಬನಿ ಮಿಡಿದಿದ್ದಾರೆ.
ಮಧ್ಯಾಹ್ನ 1.30ರ ಸುಮಾರಿಗೆ ನಗರದ ಅರಮನೆ ರಸ್ತೆಯಲ್ಲಿರುವ ಖುದ್ದುಸ್ ಸಾಹೇಬ್ ಖಬರ್ ಸ್ಥಾನ್ ನಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.