ಶಾಮ್ಲಿ: ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ಮಹಿಳೆ ಮಹಡಿಯಿಂದ ಕೆಳಗೆ ಹಾರಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ.
ಸುಷ್ಮಾ ದೇವಿ (50), ಸಾವನ್ನಪ್ಪಿದ ಮಹಿಳೆಯಾಗಿದ್ದು, ಕೈರಾನಾ ನಗರದಲ್ಲಿರುವ ತಮ್ಮ ಮನೆಯ ಟೆರೇಸ್ ಮೇಲೆ ತೆರಳಿದ್ದಾಗ ಮಂಗಗಳು ದಾಳಿ ಮಾಡಿವೆ.
ಈ ವೇಳೆ ಸುಷ್ಮಾದೇವಿ ಟೆರೇಸ್ನಿಂದ ಕೆಳಗೆ ಜಿಗಿದಿದ್ದು, ಗಂಭೀರವಾದ ಗಾಯಗಳಿಂದ ಸಾವನ್ನಪ್ಪಿದ್ದಾರೆ.
ಸುಷ್ಮಾದೇವಿ ಬಿಜೆಪಿ ನಾಯಕ ಅನಿಲ್ ಕುಮಾರ್ ಚೌಹಾಣ್ ಅವರ ಪತ್ನಿಯಾಗಿದ್ದು, ಅನಿಲ್ ಕುಮಾರ್ ಚೌಹಾಣ್ ಮಾಜಿ ಸಂಸದ, ದಿವಂಗತ ಹುಕುಂ ಸಿಂಗ್ ಅವರ ಸಂಬಂಧಿಯಾಗಿದ್ದಾರೆ.
ಇನ್ನು ಉತ್ತರ ಪ್ರದೇಶದ ಹಲವು ಪಶ್ಚಿಮದ ಜಿಲ್ಲೆಗಳಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ.
ಮಥುರಾ ಜಿಲ್ಲೆಯಲ್ಲಿ ಸೆಪ್ಟೆಂಬರ್ 1ರಿಂದ 15 ದಿನಗಳ ಕಾಲ ಮಂಗಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ.
ನಗರ ಪ್ರಮುಖ ಸ್ಥಳಗಳು ಮತ್ತು ದೇವಸ್ಥಾನಗಳ ಬಳಿ ಇರುವ ಮಂಗಗಳನ್ನು ಹಿಡಿಯುವ ಕೆಲಸವನ್ನು ಮುನ್ಸಿಪಲ್ ಕಾರ್ಪೊರೇಷನ್ ಮಾಡುತ್ತಿದೆ.
ಮೊದಲ ಹಂತದಲ್ಲಿ ಬಂಕಿ ಬಿಹಾರಿ ದೇವಸ್ಥಾನ ಪ್ರದೇಶ, ವೃಂದಾವನ, ಚೌಬಿಯಾ ಪಾರಾ ಮತ್ತು ಮಥುರಾದ ದ್ವಾರಕಾಧೀಶ ದೇವಸ್ಥಾನ ಬಳಿ ಮಂಗಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ ಎಂದು ಮುನ್ಸಿಪಲ್ ಕಮಿಷನರ್ ಅನುನಯಾ ಝಾ ಸ್ಪಷ್ಟನೆ ನೀಡಿದ್ದಾರೆ.