ಬೆಂಗಳೂರು: ಪತ್ನಿಯ ಶೀಲದ ಮೇಲೆ ಶಂಕೆ ಮಾಡಿದ ಗಂಡ ತನ್ನ ಪತ್ನಿಯನ್ನು ಡಂಬಲ್ಸ್‌ನಿಂದ ಹೊಡೆದು ಬಡಿದು ಬೀಕರವಾಗಿ ಹತ್ಯೆಗೈದ ಘಟನೆ ನಗರದ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆ ಬಳಿಕ ಪತಿಯೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಆರೋಪಿಯು ರಾಮಮೂರ್ತಿನಗರ ಪೊಲೀಸರೆದುರು ಶರಣಾಗಿದ್ದಾನೆ. ಮೊರೀಸ್ ಕೊಲೆಗೈದ ಆರೋಪಿಯಾಗಿದ್ದು ಪೊಲೀಸ್ ವಶದಲ್ಲಿದ್ದಾನೆ.
ಲಿಡಿಯಾ (44) ಕೊಲೆಯಾದ ಮಹಿಳೆಯಾಗಿದ್ದಾರೆ.ರಾಮಮೂರ್ತಿನಗರದ ಹೊಯ್ಸಳ ಸ್ಟ್ರೀಟ್ನಲ್ಲಿನ ಎರಡು ಅಂತ್ತಸಿನ ಮನೆಯೊಂದರಲ್ಲಿ ವಾಸವಾಗಿರುವ ಮೋರಿಸ್, 18 ವರ್ಷಗಳ ಹಿಂದೆ ಲಿಡಿಯಾಳನ್ನು ಮದುವೆ ಮಾಡಿಕೊಂಡಿದ್ದ.
ದಂಪತಿಗೆ ಶಾಲೆಗೆ ಹೋಗುವ ಮೂವರು ಗಂಡು ಮಕ್ಕಳಿದ್ದಾರೆ. ಪತ್ನಿ ಗೃಹಿಣಿಯಾದರೆ ಪತಿ ಮೊಬೈಲ್ ನೆಟ್ವರ್ಕ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ದಂಪತಿಯ ಸಂಸಾರದಲ್ಲಿ ಎಲ್ಲವೂ ಅನ್ಯೋನ್ಯವಾಗಿಯೇ ಇತ್ತು. ಈ ಮಧ್ಯೆ ಪತಿ ಮೋರಿಸ್ಗೆ ಪತ್ನಿಯ ಮೇಲೆ ಅನುಮಾನ ಹುಟ್ಟಿಕೊಂಡಿರುವುದು ಅನಾಹುತಕ್ಕೆ ಕಾರಣವಾಗಿದೆ.
ಪರಪುರುಷನೊಂದಿಗೆ ಸಂಬಂಧವಿದೆ ಎಂದು ಶಂಕಿಸಿ ಹೆಂಡತಿಯೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಇಂದು ಬೆಳಗ್ಗೆ ಮಕ್ಕಳು ಶಾಲೆಗೆ ಹೋದ ಮೇಲೆ ಪತ್ನಿ ಜೊತೆ ಕ್ಯಾತೆ ತೆಗೆದಿದ್ದಾನೆ.
ನೋಡ ನೋಡುತ್ತಿದ್ದಂತೆ ಗಲಾಟೆ ತಾರಕ್ಕಕ್ಕೇರಿದೆ. ಮನೆಯಲ್ಲಿದ್ದ ಸುಮಾರು ಎರಡೂವರೆ ಕೆ.ಜಿ ತೂಕದ ಡಂಬಲ್ಸ್‌ನಿಂದ ಐದಾರು ಬಾರಿ ಪತ್ನಿಯ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಬಳಿಕ ತಾನೇ ಪೊಲೀಸ್ ಕಂಟ್ರೋಲ್ ರೂಂ ಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರಿಗೆ ಮನೆಯಲ್ಲಿ ರಕ್ತ ಸಿಕ್ತವಾದ ಮಹಿಳೆ ಶವ ಸಿಕ್ಕಿದ್ದು ಆರೋಪಿಯನ್ನು ಬಂಧಿಸಿದ್ದಾರೆ.