ಮಂಗಳೂರು: ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ನಿಷೇಧ ಮಾಡಿರುವುದು ಹೈಕೋರ್ಟ್ ಆದೇಶದ ಪ್ರಕಾರ ಅಲ್ಲ. ಕೇವಲ ಎಬಿವಿಪಿ ಒತ್ತಡಕ್ಕೆ ಮಣಿದು ಹಿಜಾಬ್ ನಿಷೇಧ ಮಾಡಲಾಗಿದೆ ಎಂದು ವಿವಿ ಕಾಲೇಜಿನ ವಿದ್ಯಾರ್ಥಿನಿ ಗೌಸಿಯಾ ಹೇಳಿದ್ದಾರೆ.
ಈ ಬಗ್ಗೆ ವಿವಿ ಕಾಲೇಜಿನ ವಿದ್ಯಾರ್ಥಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೈಕೋರ್ಟ್ ಆದೇಶ ಬಂದ ನಂತರವೂ ನಾವು ಹಿಜಾಬ್ ಧರಿಸಿಯೇ ಕಾಲೇಜು ಬರುತ್ತಿದ್ದೆವು. ಈಗ ದಿಢೀರ್ ಆಗಿ ನೀವು ಬರಬೇಡಿ ಎನ್ನುತ್ತಿದ್ದಾರೆ.
ನಾವು ಇದನ್ನು ಒಪ್ಪುವುದಿಲ್ಲ ಎಂದು ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಪಟ್ಟುಹಿಡಿದ ಆರು ಮಂದಿ ವಿದ್ಯಾರ್ಥಿನಿಯರು ಹೇಳಿದ್ದಾರೆ. ಹೈಕೋರ್ಟ್ ಆದೇಶದ ಬಳಿಕವೂ ಮೇ 7ರ ವರೆಗೆ ನಾವು ಹಿಜಾಬ್ ಹಾಕ್ಕೊಂಡೇ ತರಗತಿಗೆ ಹೋಗಿದ್ದೆವು. ಆದರೆ ಕೆಲವು ದಿನಗಳ ಬಳಿಕ ರಾತ್ರೋರಾತ್ರಿ ಒಂದು ಮೆಸೇಜ್ ಬಂದಿತ್ತು.
ಕಾಲೇಜಿನಲ್ಲಿ ಹಿಜಾಬ್ ಬ್ಯಾನ್ ಮಾಡಿರುವ ಬಗ್ಗೆ ಅದರಲ್ಲಿ ಹೇಳಿತ್ತು. ಅನಧಿಕೃತ ಮಾಹಿತಿ ಆಗಿದ್ದರಿಂದ ಪ್ರಾಂಶುಪಾಲರ ಬಳಿ ಮರುದಿನ ಕೇಳಿದ್ದೆವು. ಆಗ ಅವರು ಅದು ನಾವೇ ಕಳಿಸಿಕೊಟ್ಟ ಮೆಸೇಜ್ ಎಂದು ಹೇಳಿದ್ದರು ಎಂದು ವಿದ್ಯಾರ್ಥಿನಿ ಗೌಸಿಯಾ ಹೆಳಿದ್ದಾರೆ.
ಹೈಕೋರ್ಟ್ ಆದೇಶದಲ್ಲಿ ಪದವಿ ಕಾಲೇಜು ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದು ನಾವು ಹೇಳಿದಾಗ, ಅದರ ಕಾಪಿ ತಂದುಕೊಡಿ ಎಂದು ಕೇಳಿದ್ದರು. ಅದರಂತೆ, ನಾವು ಹೈಕೋರ್ಟ್ ಆದೇಶದ ಪ್ರತಿಯನ್ನು ತಂದು ತೋರಿಸಿದ್ದೆವು.
ಇದೇ ವಿಚಾರದಲ್ಲಿ ವಿವಿಯ ಕುಲಪತಿಯವರನ್ನೂ ಭೇಟಿಯಾಗಿ ಮನವಿ ಮಾಡಿದ್ದೆವು. ಡೀಸಿ ಬಳಿಯಿಂದ ಲೆಟರ್ ತಂದರೆ, ನಾವು ಬಿಡಬಹುದು ಎಂದು ಕುಲಪತಿ ತಿಳಿಸಿದ್ದರು. ಡೀಸಿಯನ್ನು ಭೇಟಿಯಾಗಲು ಆಗ ಅವಕಾಶ ಸಿಗಲಿಲ್ಲ. ಆದರೆ ಅದೇ ಸಂದರ್ಭದಲ್ಲಿ ಸಿಂಡಿಕೇಟ್ ಸಭೆ ನಡೆದು ಹಿಜಾಬ್ ಅವಕಾಶ ನೀಡದಂತೆ ವಿವಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಕಾಲೇಜಿನ ಹಳೆಯ ಸಮವಸ್ತ್ರದ ನಿಯಮವನ್ನೇ ಮುಂದುವರಿಸಿ. ನಾವು ಹಿಂದಿನಿಂದಲೂ ಸಮವಸ್ತ್ರದ ಶಾಲನ್ನು ಹಿಜಾಬ್ ಆಗಿ ಧರಿಸಿ ಬರುತ್ತಿದ್ದೆವು. ಕಾಲೇಜಿನ ಈ ಆದೇಶದ ಹಿಂದೆ ಹೈಕೋರ್ಟ್ ಇಲ್ಲ. ಕೇವಲ ಎಬಿವಿಪಿಯ ಒತ್ತಡವಷ್ಟೇ.
ಸಮಸ್ಯೆಯನ್ನು ಬಗೆಹರಿಸಲು ಎರಡು ದಿನಗಳ ಗಡುವು ನೀಡುತ್ತಿದ್ದೇವೆ. ಇಲ್ಲದೇ ಹೋದಲ್ಲಿ ಪ್ರತಿಭಟನೆ ಮೂಲಕ ಉತ್ತರಿಸುತ್ತೇವೆ ಎಂದಿದ್ದಾರೆ.