ಮಂಗಳೂರು/ಬೆಂಗಳೂರು: ಅರೆಸ್ಟ್ ವಾರೆಂಟ್ ಜಾರಿಯಾದ ಬೆನ್ನಲ್ಲೇ ಭಾರತ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಪ್ರಸ್ತುತ ಆರೋಪ ಕೇಳಿ ಬಂದಿರುವ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಕೆಲ ವರ್ಷಗಳ ಹಿಂದೆ ರಾಜೀನಾಮೆ ನೀಡಿದ್ದೆ ಎಂದು ಹೇಳಿದ್ದಾರೆ.
ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬಿನ್ ಉತ್ತಪ್ಪ ವಿರುದ್ಧ ಬಂಧನದ ವಾರೆಂಟ್ ಜಾರಿ ಮಾಡಲಾಗಿತ್ತು. ಇದೀಗ ಈ ವಿಚಾರವಾಗಿ ಮಾಧ್ಯಮ ಪ್ರಕಟನೆಯ ಮೂಲಕ ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದು, ಆರೋಪ ಹೊತ್ತ ಕಂಪನಿಗೆ ಕೆಲ ವರ್ಷಗಳ ಹಿಂದೆಯೇ ನಾನು ರಾಜೀನಾಮೆ ನೀಡಿದ್ದೇನೆ. ಈ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.
ಕ್ರಿಕೆಟರ್ ರಾಬಿನ್ ಉತ್ತಪ್ಪ ಅವರು ತಮ್ಮ ಮೇಲೆ ಬಂದಿರುವ ಆರೋಪ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಬಾಕಿಯಿರುವ ಪಿಎಫ್ ಹಣ ಪಾವತಿಸುವಂತೆ ಒತ್ತಾಯಿಸಿ ಅಧಿಕಾರಿಗಳು ನೀಡಿರುವ ನೋಟಿಸ್‌ಗಳಿಗೆ ನನ್ನ ಕಾನೂನು ಸಲಹಾ ತಂಡ ಪ್ರತಿಕ್ರಿಯಿಸಿದೆ. ಆ ಕಂಪನಿಗಳಲ್ಲಿ ನನ್ನ ಪಾತ್ರವಿಲ್ಲ ಎಂದು ದೃಢೀಕರಿಸುವ ದಾಖಲೆ ನೀಡಿದ್ದೇನೆ.
ಅದರ ಹೊರತಾಗಿ ಪಿಎಫ್ ಅಧಿಕಾರಿಗಳು ಪ್ರಕ್ರಿಯೆ ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಷಯವನ್ನು ಬಗೆಹರಿಸಲು ನನ್ನ ಪರ ಕಾನೂನು ಸಲಹೆಗಾರರು ಕ್ರಮ ಕೈಗೊಳ್ಳಲಿದ್ದಾರೆ ಎಂದು ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಂಧನಕ್ಕೆ ಅರೆಸ್ಟ್ ವಾರೆಂಟ್ ಜಾರಿ !
2018-19ರಲ್ಲಿ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರೀಸ್ ಫ್ಯಾಶನ್ ಹೌಸ್ ಕಂಪನಿಗಳಿಗೆ ಸಾಲದ ರೂಪದಲ್ಲಿ ಹಣಕಾಸು ತೊಡಗಿಸಿದ್ದೆ. ಇದಕ್ಕಾಗಿ ಕಂಪನಿಗಳು ನನ್ನನ್ನ ನಿರ್ದೇಶಕನಾಗಿ ನೇಮಕ ಮಾಡಿದ್ದವು. ಆದರೆ ಇವುಗಳಲ್ಲಿ ಯಾವುದೇ ಸಕ್ರಿಯ ಕಾರ್ಯನಿರ್ವಾಹಕ ಪಾತ್ರ ಹೊಂದಿರಲಿಲ್ಲ. ಇದರ ಜೊತೆ ಕಂಪನಿಗಳ ನಿತ್ಯದ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರಲಿಲ್ಲ ಎಂದು ಹೇಳಿದ್ದಾರೆ.
ವೃತ್ತಿಪರ ಕ್ರಿಕೆಟಿಗ, ಬಳಿಕ ನಿರೂಪಕನಾಗಿ, ವೀಕ್ಷಕ ವಿವರಣೆಗಾರನಾಗಿ ಇದ್ದಿದ್ದರಿಂದ ಕಂಪನಿಗಳ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಸಮಯವಿರಲಿಲ್ಲ. ಇದುವರೆಗೂ ಹಣ ಹೂಡಿಕೆ ಮಾಡಿದ ಇತರೆ ಕಂಪನಿಗಳಲ್ಲಿಯೂ ಕಾರ್ಯನಿರ್ವಾಹಕನಾಗಿ ಕೆಲಸ ಮಾಡಿಲ್ಲ. ಆದರೆ ಈಗ ಕೇಳಿ ಬಂದಿರುವ ಆರೋಪ ಇರುವ ಕಂಪನಿಗಳು ಸಾಲದ ರೂಪದಲ್ಲಿ ನೀಡಿದ ಹಣವನ್ನು ನನಗೆ ಮರುಪಾವತಿಸಲು ವಿಫಲವಾಗಿವೆ. ಹೀಗಾಗಿ ಹಲವು ವರ್ಷಗಳ ಹಿಂದೆ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈ ಬಗ್ಗೆ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದು ಹೇಳಿದ್ದಾರೆ.